ಅಬುಧಾಬಿ, ಆ 24(SS): ಕೇಂದ್ರ ಸರಕಾರ ಘೋಷಿಸಿರುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಯುಎಇ, ಪ್ರವಾಹ ಪೀಡಿತ ಕೇರಳಕ್ಕೆ ನೀಡಿರುವ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ಇಂತಿಷ್ಟು ಮೊತ್ತದ ಆರ್ಥಿಕ ನೆರವು ನೀಡುತ್ತೇವೆ ಎಂಬ ಯಾವುದೇ ಅಧಿಕೃತ ಪ್ರಕಟಣೆಗಳು ಯುಎಇಯಿಂದ ಹೊರಬಂದಿಲ್ಲ ಎಂದು ಯುಎಇ ರಾಯಭಾರಿ ಅಹ್ಮದ್ ಅಲ್ಬಾನ್ನಾ ಹೇಳಿದ್ದಾರೆ.
ಕೇರಳಕ್ಕೂ ದೂರದ ಯುಎಇ ದೇಶಕ್ಕೂ ಬಹಳಷ್ಟು ನಂಟಿದೆ. ಶತಮಾನದ ಮಹಾ ಪ್ರವಾಹಕ್ಕೆ ತುತ್ತಾಗಿರುವ ಕೇರಳ ರಾಜ್ಯಕ್ಕೆ ಯುಎಇ 700 ಕೋಟಿ ರೂ.ಗಳ ಹಣಕಾಸಿನ ನೆರವು ನೀಡುವುದಾಗಿ ಹೇಳಿದೆ ಎಂದು ಸ್ವತಃ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಈ ನಡುವೆ ಯುಎಇ ನೆರವು ಪಡೆಯಲು ಕೇಂದ್ರದ ನೀತಿ ಅಡ್ಡಿಯಾಗುತ್ತಿದೆ ಅನ್ನುವ ವಿಚಾರ ಕೂಡ ಬಹಳ ಚರ್ಚೆಗೆ ಕಾರಣವಾಗಿತ್ತು. ಮಾತ್ರವಲ್ಲ, 700 ಕೋಟಿ ರೂಪಾಯಿ ನೀಡಲು ಮುಂದೆ ಬಂದಿರುವ ಯುಎಇ ನೆರವು ಸ್ವೀಕಾರಕ್ಕೆ ಒಪ್ಪಿ, ಇಲ್ಲವೇ ನೀವೇ ಪರಿಹಾರ ಕೊಡಿ ಎಂದು ಕೇರಳ ಸರಕಾರ ಕೇಂದ್ರಕ್ಕೆ ಒತ್ತಾಯ ಮಾಡಿತ್ತು.
ಆದರೆ ಇದೀಗ ಕೇರಳಕ್ಕೆ ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ಇಂತಿಷ್ಟು ಮೊತ್ತದ ಆರ್ಥಿಕ ನೆರವು ನೀಡುತ್ತೇವೆ ಎಂಬ ಯಾವುದೇ ಅಧಿಕೃತ ಆದೇಶಗಳು ಯುಎಇಯಿಂದ ಹೊರಬಂದಿಲ್ಲ. ಆದರೆ ಕೇರಳ ಮುಖ್ಯಮಂತ್ರಿ ಯಾಕೆ ಹಾಗೆ ಹೇಳಿದ್ದಾರೆ ಎಂದು ನಮಗೆ ಗೊತ್ತಿಲ್ಲ. ನಾವು ಕೇರಳಕ್ಕೆ 700 ಕೋಟಿ ಪರಿಹಾರ ನೀಡುವುದಾಗಿ ಎಲ್ಲೂ ಘೋಷಣೆ ಮಾಡಿಲ್ಲ ಎಂದು ಯುಎಇ ರಾಯಭಾರಿ ಅಹ್ಮದ್ ಅಲ್ಬಾನ್ನಾ ಹೇಳಿದ್ದಾರೆ.
ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತುರ್ತು ಸಮಿತಿಯು ಮಾಹಿತಿ ನೀಡಿದ್ದು, ಸೂಕ್ತ ನೆರವು ನೀಡುವ ಬಗ್ಗೆ ಚರ್ಚಿಸಲಾಗಿತ್ತು ಎಂದು ಹೇಳಿದೆ. ಸೂಕ್ತ ನೆರವು ನೀಡಲು ಸಿದ್ಧವಾಗಿದ್ದು ಆದರೆ ಹಣದ ಪ್ರಮಾಣದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.