ತ್ರಿಶೂರ್, ಆ 24(SS): ಮಸೀದಿ ಜಲಾವೃತಗೊಂಡ ಪರಿಣಾಮ, ಮುಸ್ಲಿಂ ಸಮುದಾಯದ ಸಹೋದರರು ಹಿಂದೂ ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿರುವ ಘಟನೆಯೊಂದು ಕೋಮುಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ಕೊಚುಕಡವು ಸಮೀಪದ ಜುಮಾ ಮಸೀದಿ ಮಹಾಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿತ್ತು. ಪರಿಣಾಮ ಮುಸ್ಲಿಂ ಸಹೋದರರಿಗೆ ಪ್ರಾರ್ಥನೆ ಸಲ್ಲಿಸಲು ಸ್ಥಳವಿರಲಿಲ್ಲ. ಈ ಹಿನ್ನೆಲೆಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ಅಲ್ಲಿನ ಮೌಲ್ವಿ ಬೇರೆ ಸ್ಥಳವನ್ನು ಹುಡುಕುತ್ತಿದ್ದರು. ತಕ್ಷಣ ಇದನ್ನು ಗಮನಿಸಿದ ದೇವಾಲಯದ ಸಿಬ್ಬಂದಿಗಳು ಪ್ರಾರ್ಥನೆ ಮಾಡುವುದಕ್ಕೆ ಮುಸ್ಲಿಂ ಬಾಂಧವರಿಗೆ ದೇವಾಲಯದ ಸಭಾಂಗಣ ಬಿಟ್ಟುಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ.
ಇರವಥೂರ್ ಎಂಬಲ್ಲಿ ಪುರಪುಲ್ಲಿಕಾವು ರತ್ನೇಶ್ವರಿ ಎಂಬ ದೇವಾಲಯವೊಂದಿದ್ದು, ಈ ದೇವಾಲಯದ ಸಭಾಂಗಣದಲ್ಲಿ ಮುಸ್ಲಿಂ ಸಹೋದರರು ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಪ್ರಾರ್ಥನೆಗೆ ಸ್ವತಃ ಹಿಂದೂ ಸಹೋದರರೇ ಅವಕಾಶ ಮಾಡಿ ಕೊಟ್ಟಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಮುಸ್ಲಿಮರು ದೇವಾಲಯದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಕೋಮುಸಾಮರಸ್ಯದ ಆದರ್ಶ ಪಾಲನೆಯಾಗಿದೆ.
ಈದ್ ಪ್ರಾರ್ಥನೆ ಸಲ್ಲಿಸುವುದಕ್ಕೆ ದೇವಾಲಯದಲ್ಲಿ ಅವಕಾಶ ಮಾಡಿಕೊಟ್ಟಿರುವುದಕ್ಕೆ ಮಸೀದಿಯ ಅಧ್ಯಕ್ಷ ಪಿ.ಎ ಖಾಲೀದ್ ಸಂತಸ ವ್ಯಕ್ತಪಡಿಸಿದ್ದಾರೆ.