ಮಡಿಕೇರಿ, ಆ 24(SS): ಪ್ರಧಾನಿ ಮೋದಿಯವರು ಮಳೆಯಿಂದ ಹಾನಿಗೊಳಗಾಗಿರುವ ಮತ್ತು ನಾಶಗೊಂಡು ಅತಂತ್ರ ಸ್ಥಿತಿಯಲ್ಲಿರುವ ಕೊಡಗಿಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಲಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿ ಪ್ರವಾಹ ಪೀಡಿತ ಕೇರಳಕ್ಕೆ ಹೋಗಿ ಸಮೀಕ್ಷೆ ನಡೆಸಿದ್ದರು. ಹಾಗೆಯೇ ಕೊಡಗಿಗೂ ಬಂದು ನೋಡಬೇಕಿತ್ತು. ಇನ್ನಾದರೂ ಕೊಡಗಿಗೆ ಭೇಟಿ ನೀಡಿ, ಅಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಿ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸರಕಾರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಆದರೆ ಅದರ ವೇಗ ಇನ್ನೂ ಹೆಚ್ಚಾಗಬೇಕು. ಮಹಾ ಮಳೆಯಿಂದ ತತ್ತರಿಸಿರುವ ಕೊಡಗಿನಲ್ಲಿ ಮೂಲಭೂತ ಸೌಕರ್ಯಗಳ ಮರು ನಿರ್ಮಾಣ ಆಗಬೇಕು. ಇದಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಹಾ ಮಳೆಯಿಂದ ಕೊಡಗು ಸೇರಿದಂತೆ ಹಲವಾರು ಊರುಗಳು ಹಾಳಾಗಿದೆ. ಜನ ಆಸ್ತಿಪಾಸ್ತಿ, ಮನೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕ ಕೂಡ ಕಡಿತವಾಗಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ನೂರಾರು ಮಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.
ಜಲಪ್ರವಾಹದಿಂದ ಸಾವಿರಾರು ಎಕರೆ ಕೃಷಿ, ಜಮೀನು ಹಾಳಾಗಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಕೃಷಿ ಭೂಮಿ ಕಳೆದುಕೊಂಡವರಿಗೆ ಜಮೀನು ನೀಡುವ ಬಗ್ಗೆ ಸರಕಾರದ ಜತೆ ಮಾತುಕತೆ ನಡೆಸುತ್ತೇನೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ಬೆಳೆ ಹಾನಿ ಬಗ್ಗೆಯೂ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೊಡವರ ನಾಡಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಂದು ಪರಿಶೀಲನೆ ನಡೆಸಿದ್ದಾರೆ. ಸಚಿವರು ಕೂಡ ಭೇಟಿ ನೀಡಿದ್ದಾರೆ. ಶಾಲಾ ಮಕ್ಕಳಿಗೂ ನೆರವಾಗಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮುಂದೆ ಈ ರೀತಿ ಅನಾಹುತ ಅಗದಂತೆ ನೋಡಿಕೊಳ್ಳಲು ತಜ್ಞರ ಸಮಿತಿ ರಚನೆ ಆಗಬೇಕು. ಈ ಹಿನ್ನೆಲೆಯಲ್ಲಿ, ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.