ಬಂಟ್ವಾಳ, ಆ 23(SM): ಆಕಸ್ಮಿಕವಾಗಿ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ನಾವೂರಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಮೈಂದಾಳ ಲಿಕಾಯತ್ ಎಂಬವರ ಬೆಡ್ ಮಾರ್ಟ್ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಘಟನೆ ನಡೆದಿದ್ದು, ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ.
ಅಗ್ನಿ ಅವಘಡದಿಂದಾಗಿ ಬೆಡ್ ಶೀಟ್ ಗಳನ್ನು ತಯಾರಿಸುವ ಕಚ್ಚಾ ವಸ್ತುಗಳು ಸೇರಿದಂತೆ ತಯಾರು ಮಾಡಲಾಗಿದ್ದ ಬೆಡ್ ಶೀಟುಗಳು ಕೂಡಾ ಬೆಂಕಿಗಾಹುತಿಯಾಗಿದೆ. ಬಂಟ್ವಾಳ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.