ಮಂಗಳೂರು, ಆ 23(SM): ಸ್ಯಾಂಡಲ್ ವುಡ್ ನ ನಿರ್ದೇಶಕ ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಕೊಡುಗೆ-ರಾಮಣ್ಣ ರೈ’ ಚಿತ್ರದ ಪ್ರೀಮಿಯರ್ ಶೋ ನಗರದ ಬಿಗ್ ಸಿನಿಮಾಸ್ ನಲ್ಲಿ ಆಗಸ್ಟ್ 23ರ ಗುರುವಾರ ನಡೆಯಿತು. ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರು ಮನಪಾ ಮೇಯರ್ ಭಾಸ್ಕರ್ ಮೊಯ್ಲಿ ಜೊತೆಗೆ ಪ್ರೀಮಿಯರ್ ಶೋಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕಮಿಷನರ್, “ಕಿರಿಕ್ ಪಾರ್ಟಿ ಚಿತ್ರದ ನಂತರ ನಿರ್ದೇಶಕ ರಿಶಬ್ ಅವರದು ಮತ್ತೊಂದು ಚಿತ್ರ ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು. ಈ ಸಿನಿಮಾದಲ್ಲಿ ನಿರ್ದೇಶಕರು ಕಾಸರಗೋಡು ಗಡಿ ಭಾಗದ ಶಾಲೆಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚಿತ್ರೀಕರಿಸಿದ್ದಾರೆ. ಈ ಚಿತ್ರ ಗಡಿ ಪ್ರದೇಶದ ಜನರನ್ನು ಮತ್ತಷ್ಟು ಒಗ್ಗೂಡಿಸಲಿದೆ” ಎಂದರು.
ಈ ಸಿನಿಮಾ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಪ್ರಮುಖ ವಿಷಯವನ್ನು ಒಳಗೊಂಡಿದೆ. ಅಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ಈ ಸಿನಿಮಾದ ಮೂಲಕ ದೊರಕಲಿದೆ. ಚಿತ್ರ ಆಗಸ್ಟ್ 24ರಂದು ತೆರೆ ಮೇಲೆ ಬರಲಿದೆ. ಅನಂತ್ ನಾಗ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಸೇರಿದಂತೆ ಬಾಲ ನಟರನ್ನೊಳಗೊಂಡ ತಾರಗಣ ಸಿನಿಮಾದಲ್ಲಿ ಕಾಣಬಹುದಾಗಿದೆ.