ಕಾರ್ಕಳ, ಆ 23 (MSP): ಈ ವರ್ಷದಲ್ಲಿ ನಡೆದ ಪ್ರಾಕೃತಿಕ ವಿಕೋಪದಿಂದ ಕಾರ್ಕಳತಾಲೂಕಿನಲ್ಲಿ ಸುಮಾರು ರೂ. 50 ಕೋಟಿ ನಷ್ಟ ಉಂಟಾಗಿದ್ದು, ರಾಜ್ಯ ಸರಕಾರವು ತ್ವರಿತಗತಿಯಲ್ಲಿ ಪರಿಹಾರ ಬಿಡುಗಡೆ ಮಾಡುವಂತೆ ಶಾಸಕ ಹಾಗೂ ವಿಧಾನಸಭಾ ಮುಖ್ಯಸಚೇತಕ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಕಾರ್ಕಳದ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾಗೋಷೀಯಲ್ಲಿ ಮಾತನಾಡಿದ ಅವರು ಪಾಕೃತಿಕ ವಿಕೋಪದಡಿಯಲ್ಲಿ ನಡೆದ ನಷ್ಟವು ಜನಜೀವನದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಈ ಕುರಿತು ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿ ಜೊತೆಯಲ್ಲಿ ಹತ್ತಾರು ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ನಷ್ಟದ ಅಂದಾಜುಗಳನ್ನು ಲೆಕ್ಕ ಹಾಕಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಲೋಕೋಪಯೋಗಿ ಇಲಾಖೆಯೊಂದರ ಪ್ರಕಾರ 90 ಕಿ.ಮೀ ರಸ್ತೆ ಹಾನಿಗೊಳಗಾಗಿದೆ. ಸುಮಾರು 21 ಕೋಟಿ 13 ಲಕ್ಷ ನಷ್ಟ ಉಂಟಾಗಿದೆ. ಗ್ರಾಮೀಣ ರಸ್ತೆಗಳ ಹಾನಿಯಿಂದ 15 ಕೋಟಿ ನಷ್ಟ ಉಂಟಾಗಿದೆ.7 ಸೇತುವೆಗಳು ಭಾಗಶಃ ಹಾನಿಗೊಳಗಾಗಿದ್ದು, 3 ಕೋಟಿ ನಷ್ಟವಾಗಿದೆ. ಸರಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು, ಸರಕಾರಿ ಕಟ್ಟಡಗಳ ಹಾನಿ ಪ್ರಮಾಣ 1 ಕೋಟಿ.288 ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಪುರಸಭಾ ವ್ಯಾಪ್ತಿಯ ರಸ್ತೆಗಳು ತೀವ್ರ ತರದಲ್ಲಿ ಹಾನಿಗೊಳಗಾಗಿದ್ದು 2 ಕೋಟಿ ನಷ್ಟ ಉಂಟಾಗಿದೆ. ಮೆಸ್ಕಾಂ ಇಲಾಖೆಯಲ್ಲಿ ಮೇ ತಿಂಗಳಿನಿಂದ ಇದುವರೆಗೆ 1030 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 90 ಟಿ.ಸಿಗಳು ದುಸ್ಥಿತಿಯಲ್ಲಿದೆ. 1 ಕೋಟಿ 55 ಲಕ್ಷ ನಷ್ಟ ಉಂಟಾಗಿದೆ. ಕಾಲು ಸಂಕಗಳ ದುರಸ್ಥಿಗೆ 80 ಲಕ್ಷ ಅನುದಾನದ ಅಗತ್ಯ ಇದೆ ಎಂಬ ಅಂದಾಜು ಪಟ್ಟಿಯ ವಿವರವನ್ನು ನೀಡಿದರು.
ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಡಿಯಲ್ಲಿ ಸಂಭವಿಸಿದ ನಷ್ಟಕ್ಕೆ 50 ಕೋಟಿಯ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯದ ಕಂದಾಯ ಸಚಿವರನ್ನು ಆಗ್ರಹಿಸಿದ್ದಾರೆ. ಎಲ್ಲಾ ಇಲಾಖೆಗಳ ವರದಿಗಳನ್ನು ಕ್ರೋಢಿಕರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಆ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಲಾಗುವುದೆಂದರು.