ಮಧ್ಯಪ್ರದೇಶ, ಆ 23 (MSP): ತನ್ನ ಪ್ರಾಣ ಕೊಟ್ಟಾದರೂ ತುಂಡು ರೊಟ್ಟಿ ಕೊಟ್ಟ ಮಾಲೀಕನನ್ನು ನಿಯತ್ತಿನ ನಾಯಿ ರಕ್ಷಿಸುತ್ತದೆ ಎನ್ನುವುದು ಇದಕ್ಕೆ ಇರಬೇಕು. ಇದಕ್ಕೆ ಜ್ವಲಂತ ಉದಾಹರಣೆ ಮನೆಯಲ್ಲಿ ಸಾಕಿದ ನಾಯಿಯೊಂದು ತನ್ನ ಮಾಲಕಿಯನ್ನು ಅತ್ಯಾಚಾರಿಗಳಿಂದ ರಕ್ಷಿಸಿದೆ. ಈ ಘಟನೆ ನಡೆದಿರುವುದ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ. ಇಲ್ಲಿನ ಮೋತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾಗರ್ ಜಿಲ್ಲೆಯಲ್ಲಿರುವ ಊರಿನಲ್ಲಿ ಸೊಳ್ಳೆಯನ್ನು ಓಡಿಸಲು ಹುಲ್ಲನ್ನು ಸುಟ್ಟು ಹೊಗೆ ಹಾಕುವ ಪರಿಪಾಠವಿದೆ. ಹೀಗಾಗಿ 14 ವರ್ಷದ ಬಾಲಕಿ ರಾತ್ರಿ ಸೊಳ್ಳೆ ಕಾಟದಿಂದ ಬೇಸತ್ತು ಇದನ್ನು ನಿಯಂತ್ರಿಸಲು ಹೊಗೆ ಹಾಕಿ ಸೊಳ್ಳೆ ಓಡಿಸಲೆಂದು ಹುಲ್ಲು ತರಲು ಮನೆಯಿಂದ ಹೊರಗೆ ಬಂದಿದ್ದಾಳೆ. ಈ ಸಂದರ್ಭ ಅಲ್ಲಿದ್ದ ಇಬ್ಬರು ಕಾಮುಕರು ಚೂರಿ ತೋರಿಸಿ ಬೆದರಿಸಿ ಬಲವಂತವಾಗಿ ಅಲ್ಲೇ ಸನಿಹದಲ್ಲಿದ್ದ ನಿರ್ಜನ ಪ್ರದೇಶಕ್ಕೆ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಕೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಅಲಿಸಿದ ಮನೆಯ ನಾಯಿ ಅಲ್ಲಿಗೆ ಬಂದು ಬಾಲಕಿಯ ಮೇಲೆರಗಿದವರ ಮೇಲೆ ದಾಳಿ ಮಾಡಿದೆ. ಕಾಮುಕರು ಚೂರಿಯಿಂದ ನಾಯಿಗೆ ದಾಳಿ ಮಾಡಿದರೂ, ನಾಯಿ ಮಾತ್ರ ಅವರನ್ನು ಕಚ್ಚುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು, ಐಶು ಅಹಿರ್ವರ್ (39) ಮತ್ತು ಪುನೀತ್ ಅಹಿರ್ವರ್ (24) ಎಂಬ ಇಬ್ಬರು ಆರೋಪಿಗಳನ್ನು ಪೋಸ್ಕೋ ಕಾಯ್ದೆ ಅಡಿ ಬಂಧಿಸಲಾಗಿದೆ.
ಆರೋಪಿಗಳು ಕಳ್ಳತನದಲ್ಲಿ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದು ಬಳಿಕ ಬೇಲ್ ಪಡೆದುಕೊಂಡು ಹೊರಬಂದಿದ್ದರು. ಇನ್ನು ಕಾಮುಕರ ಕಾಲಿಗೆ ನಾಯಿ ಬಲವಾಗಿ ಕಚ್ಚಿದ್ದರಿಂದ ಆರೋಪಿಗಳನ್ನು ಪೊಲೀಸರು ಸುಲಭವಾಗಿ ಪತ್ತೆ ಮಾಡಿದ್ದಾರೆ. ಇದೀಗ ಈ ನಾಯಿಯ ಪರಾಕ್ರಮವನ್ನು ಎಲ್ಲೆಡೆ ಕೊಂಡಾಡಲಾಗುತ್ತಿದೆ.