ಪುತ್ತೂರು, ಆ 22(SM): ಬಕ್ರೀದ್ ಹಬ್ಬದ ಪ್ರಯುಕ್ತ ಸಹಪಾಠಿಯೋರ್ವನ ಮನೆಗೆ ಆತಿಥ್ಯಕ್ಕಾಗಿ ಬಂದ ಅನ್ಯಕೋಮಿನ ಯುವಕ-ಯುವತಿಯರನ್ನು ಸ್ಥಳೀಯರು ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಕ್ರಿದ್ ಹಬ್ಬದ ಸಲುವಾಗಿ ನಿಡ್ಪಳ್ಳಿ ಕೆರೆಮಾರಿನ ಅಬ್ದುಲ್ ಶಮೀರ್ ಎಂಬಾತನು ತನ್ನ ಸಹಪಾಠಿಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದ. ಸ್ನೇಹಿತನ ಮನೆಗೆ ಜೌತಣಕೂಟಕ್ಕೆ ಅನ್ಯಕೋಮಿನ ಯುವಕ-ಯುವತಿಯರು ಆಗಮಿಸಿದ್ದ ಸಂದರ್ಭ ರೆಂಜ ರಿಕ್ಷಾ ತಂಗುದಾಣದ ಬಳಿ ರಿಕ್ಷಾ ಚಾಲಕ ರುಕ್ಮ ಎಂಬಾತ ಅವರನ್ನು ಪ್ರಶ್ನಿಸಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಸ್ಥಳೀಯರು ಗುಂಪು ಸೇರಿ ಯುವತಿಯರನ್ನು ತರಾಟೆಗೆತ್ತಿಕೊಂಡಿದ್ದಾರೆ. ಔತಣಕ್ಕೆ ಹೋಗಲು ತಡೆಯೊಡ್ಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಯುವಕನೋರ್ವನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭ ಕರ್ತವ್ಯದಲ್ಲಿದ್ದ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ವಿಚಾರಿಸಿದ್ದು ಧರ್ಮದ ಹೆಸರಿನಲ್ಲಿ ಗಲಾಟೆ ಎಬ್ಬಿಸಲು ಯತ್ನಿಸಿದ ಆರೋಪದಡಿ ರುಕ್ಮ ಸತೀಶ್ ಕರ್ನಪ್ಪಾಡಿ, ಶೇಷಪ್ಪ ಪಿಟ್ಟರ್, ರಿಕ್ಷಾ ಚಾಲಕ ಗಣೇಶ್, ಕುಂಜ್ಞಿ, ದುಗ್ಗಪ್ಪ ಹಾಗೂ ಪುರುಷೋತ್ತಮ ಎಂಬವರನ್ನು ವಶಕ್ಕೆ ಪಡೆದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.