ಮಂಗಳೂರು,ಸೆ.05: ಮಕ್ಕಳನ್ನು ಆಕರ್ಷಿಸಿ, ಅವರನ್ನು ಮೃತ್ಯಕೂಪಕ್ಕೆ ದೂಡುತ್ತಿರುವ ಅಪಾಯಕಾರಿ ಬ್ಲೂವೇಲ್ ಆನ್ಲೈನ್ ಗೇಮ್ ಕುರಿತು ಇದೀಗ ಜಿಲ್ಲಾ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಮಕ್ಕಳ ಸುರಕ್ಷತೆಯ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಯಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಜಿಲ್ಲೆಯ ಎಲ್ಲಾ 1476 ಪ್ರಾಥಮಿಕ ಹಾಗೂ 554 ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಸುತ್ತೋಲೆ ನೀಡಲಾಗಿದೆ. ಇದರಲ್ಲಿ ಸರಕಾರಿ, ಅನುದಾನಿತ ಖಾಸಗಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಕೂಡಾ ಸೇರಿವೆ. ಶಿಕ್ಷಣ ಇಲಾಖೆ ನಡೆಸಿದ ಅಧಿಕಾರಿ ಮಟ್ಟದ ಸಭೆಯಲ್ಲೂ ಬ್ಲೂವೇಲ್ ಗೇಮ್ ಕುರಿತು ಸಾಕಷ್ಟು ಚರ್ಚೆ, ಚಿಂತನ, ಮಂಥನ ನಡೆಸಿದ ಬಳಿಕ ಸುತ್ತೋಲೆ ನೀಡುವ ತೀರ್ಮಾನಕ್ಕೆ ಬರಲಾಗಿದೆ.