ಕುಂದಾಪುರ, ಆ 22(SM): ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡ ಯುವಕರ ತಂಡವೊಂದು ಬೈಕ್ ಸವಾರರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಕುಂದಾಪುರದ ಗಂಗೊಳ್ಳಿಯ ವೀರಶೈವ ದೇವಸ್ಥಾನ ಸಮೀಪ ಆಗಸ್ಟ್ 22ರ ಬುಧವಾರ ಮಧ್ಯಾಹ್ನ ನಡೆದಿದೆ. ಗಂಗೊಳ್ಳಿಯ ಶಾಹೀಮೋಹಲ್ಲಾ ನಿವಾಸಿ ಅಬು ಸಮದ್ ಬಗಲಿ ಎಂಬುವರ ಪುತ್ರ ಅಬು ಸುಫಿಯಾನ್(19) ಎಂಬವರು ಹಲ್ಲೆಯಿಂದ ಗಾಯಗೊಂಡವರು. ಸುಫಿಯಾನ್ ಹಾಗೂ ನುಹೈಲ್ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ತಂಡ ಏಕಾಎಕಿ ಬೈಕ್ ತಡೆದು ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಸುಫಿಯಾನ್ ಎಂಬುವರು ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಬಕ್ರೀದ್ ಹಬ್ಬಕ್ಕೆಂದು ಊರಿಗೆ ತೆರಳಿದ್ದರು. ಈ ಸಂದರ್ಬ ಸಂಬಂಧಿಕರ ಮನೆಗೆ ತೆರಳಿ ಸಂಬಂಧಿ ನುಹೈಲ್ ಜೊತೆಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭ ವೀರೇಶ್ವರ ದೇವಸ್ಥಾನದ ಸಮೀಪ ಒಂಭತ್ತು ಜನರ ತಂಡವೊಂದು ಇವರನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲದೆ ಬೈಕಿನ ಸೀಟಿನಡಿಯಲ್ಲಿ ದನ ಮಾಂಸ ಇದೆ ಎಂದು ಗೊತ್ತಿದೆ. ತೆಗೆದು ತೋರಿಸು ಎಂದು ಬೆದರಿಸಿದ್ದಾರೆ. ಹೆದರಿದ ಯುವಕರು ಬೈಕ್ ನಿಲ್ಲಿಸಿ ಸೀಟ್ ಓಪನ್ ಮಾಡಿ ತೋರಿಸಿದ್ದಾರೆ. ಅಲ್ಲಿ ಯಾವುದೇ ಮಾಂಸದ ಚೀಲಗಳು ಇಲ್ಲದ್ದನ್ನು ಕಂಡು ಅವಮಾನಕ್ಕೊಳಗಾದ ಯುವಕರ ಗುಂಪು ಸುಫಿಯಾನ್ಗೆ ಹಲ್ಲೆ ನಡೆಸಿದ್ದಲ್ಲದೇ ಹೋಂಡಾ ಆಕ್ಟಿವಾ ಬೈಕನ್ನು ಜಖಂಗೊಳಿಸಿದ್ದಾರೆ. ಗಾಯಗೊಂಡಿರುವ ಸುಫಿಯಾನ್ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.