ಸುಳ್ಯ, ಆ 22(SM): ಜೋಡುಪಾಲ ನೆರೆಹಾವಳಿಯಿಂದ ಹಲವಾರು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರವನ್ನು ಸೇರಿಕೊಂಡಿವೆ. 300ಕ್ಕೂ ಅಧಿಕ ಮಂದಿ ಅರಂತೋಡು ತೆಕ್ಕಿಲ್ ಹಾಲ್ ನಲ್ಲಿ ತೆರೆಯಲಾಗಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಬೀಡುಬಿಟ್ಟಿದ್ದಾರೆ. ಸ್ಥಳೀಯರು ಹಾಗೂ ವಿವಿಧ ಸಂಘ ಸಂಸ್ಥೆಗಳು ಇಲ್ಲಿರುವವರಿಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಸ್ಥಳಕ್ಕೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿದ್ದಾರೆ.
ಆಗಸ್ಟ್ 22ರ ಬುಧವಾರದಂದು ತಹಶೀಲ್ದಾರ್ ಕುಂಜಮ್ಮ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ತಹಶೀಲ್ದಾರ್ ಹಾಗೂ ನಿರಾಶ್ರಿತ ನಡುವೆ ಮಾತಿನ ಚಕಮಕಿ ನಡೆದಿದೆ. ನಿರಾಶ್ರಿತರ ಕೇಂದ್ರದಲ್ಲಿರುವವರಿಗೆ, “ಮನೆಗೆ ಹೋಗುವವರು ಬರೆದುಕೊಟ್ಟು ಹೋಗಿ” ಎಂದು ತಹಶೀಲ್ದಾರ್ ಹೇಳಿದ್ದು, ಈ ವಿಚಾರಕ್ಕೆ ಕೇಂದ್ರದಲ್ಲಿದ್ದವರು ಅಸಮಾಧಾನಗೊಂಡಿದ್ದಾರೆ. ದೇವರ ಕೊಲ್ಲಿಯ ಶಹೀದ್ ಅಲ್ಲಲ್ಲಿ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆಯನ್ನು ನೀಡಬೇಕು” ಎಂದು ಒತ್ತಾಯಿಸಿದ್ದಾರೆ.