ಪುತ್ತೂರು, ಆ 22 (MSP): ಮಾರುತಿ ಕಾರಿನಲ್ಲಿ ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಆಗಸ್ಟ್ 21ರ ಮಂಗಳವಾರ ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಜಿಂಕೆ ಕೊಂಬುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಸಂದರ್ಭ ಒಬ್ಬ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕೋಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಶೈಜು (26 ), ಕುಟ್ರುಪ್ಪಾಡಿ ಗ್ರಾಮದ ಅಲರಾಮೆ ನಿವಾಸಿ ಸಜಿ ಎ.ಕೆ (40), ಕಾರ್ಕಳ ಅಜೆಕಾರು ಗ್ರಾಮದ ಸಂದೀಪ (29) ಹಾಗೂ ಕುಟ್ರುಪ್ಪಾಡಿ ಗ್ರಾಮದ ಮಿನಾಡಿಯ ಸಜೀತ್ ಅಬ್ರಾಹಂ (32) ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ಸಂದರ್ಭ ರಜಿತ್ ಕೋಡಿಂಬಾಳ ಎನ್ನುವಾತ ಪರಾರಿಯಾಗಿದ್ದು ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಜಿಂಕೆ ಕೊಂಬನ್ನು ಕಾರ್ಕಳದ ಅಜೆಕಾರುವಿನಿಂದ ಪುತ್ತೂರು ನಗರಕ್ಕೆ ಮಾರಾಟ ಮಾಡಲೆಂದು ಸಾಗಿಸುತ್ತಿದ್ದರು. ಅಕ್ರಮ ಸಾಗಾಟದ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಪಿಎಸ್ ಐ ಮತ್ತು ಸಿಬ್ಬಂದಿ ಉಪ್ಪಿನಂಗಡಿಯಲ್ಲಿ ವಾಹನವನ್ನು ತಡೆದು ನಿಲ್ಲಿಸಿದರು. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿಗಳು ವಾಹನವನ್ನು ಪುತ್ತೂರು ಕಡೆಗೆ ಚಲಾಯಿಸಿದ್ದಾರೆ. ಅದಾಗಲೇ ಉಪ್ಪಿನಂಗಡಿ ಪೊಲೀಸರು ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ . ಇದರಿಂದ ಎಚ್ಚೆತ್ತುಕೊಂಡ ಪುತ್ತೂರು ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಪುತ್ತೂರು ನಗರ ಪೊಲಿಸ್ ನಿರೀಕ್ಷಕರಾದ ಮಹೇಶ್ ಪ್ರಸಾದ ರವರು ತನಿಖೆ ನಡೆಸುತ್ತಿದ್ದಾರೆ . ಆಪಾದಿತರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಅಧಿನಿಯಮ 1972 ರಂತೆ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇ ಗೌಡ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.