ಮುಂಬಯಿ, ಆ 21 (MSP): ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ಹೃದಯಘಾತದಿಂದ ವಿಧಿವಶರಾಗಿದ್ದಾರೆ. 63 ವಯಸ್ಸಿನ ಗುರುದಾಸ್ ಕಾಮತ್ ಇಂದು ಮುಂಜಾನೆ ದೆಹಲಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 22 ರ ಬುಧವಾರ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮುಂಬಯಿನ ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.ಗುರುದಾಸ್ ಕಾಮತ್ ಮೂಲತಃ ಅಂಕೋಲದವರಾಗಿದ್ದರು.
ಕಾಮತ್ ಮುಂಬಯಿಯಿಂದ ಐದು ಬಾರಿ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು. 1976 ರಿಂದ 1980 ರವರೆಗೆ ಎನ್ಎಸ್ ಯುಐ ಅಧ್ಯಕ್ಷರಾಗಿದ್ದರು. 2009 ರಿಂದ 2011 ರವರೆಗೆ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಹೆಚ್ಚುವರಿ ಖಾತೆ ಹಾಗೂ ಗೃಹ ವ್ಯವಹಾರಗಳ ಇಲಾಖೆ ರಾಜ್ಯ ಸಚಿವರಾಗಿದ್ದರು. ಮುಂಬಯಿನ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಗುರುದಾಸ್ ಜುಲೈ 2011 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಇವರು ಮುಂಬಯಿನ ಆರ್. ಎ ಪೋಡರ್ ಕಾಲೇಜಿನಿಂದ ವಾಣಿಜ್ಯ ಪದವಿ, ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು.