ಮಂಗಳೂರು, ಆ 21: ತಮ್ಮ ಮದುವೆ ಸಂಭ್ರಮವನ್ನು ನೆನಪಲ್ಲಿಡುವಂತಾಗಲು ವಧುವರರು ಇತ್ತೀಚಿನ ದಿನಗಳಲ್ಲಿ ಏನೆಲ್ಲಾ ಕಸರತ್ತು ನಡೆಸುತ್ತಿರೋದು ಮಾಮೂಲು. ಅದರಲ್ಲೂ ಕರಾವಳಿಯಲ್ಲಿ ಹಸೆಮಣೆವೇರೋ ನವದಂಪತಿಗಳು ವಿಭಿನ್ನವಾಗಿ ಗುರುತಿಸಿಕೊಳ್ಳೋದರ ಮೂಲಕ ತಮ್ಮ ಜೀವನದ ಪ್ರಮುಖ ಘಟ್ಟವನ್ನು ಸ್ಮರಣೀಯವನ್ನಾಗಿಸುತ್ತಾರೆ. ಆದ್ರೆ ಇಲ್ಲೊಂದು ನವದಂಪತಿ ಅದೆಲ್ಲದರ ಬದಲು ಕೇರಳ ನೆರೆ ಪೀಡಿತ ಸಂತ್ರಸ್ತರಿಗೆ ದೇಣಿಗೆ ನೀಡಿ ಮಾದರಿಯಾಗಿದ್ದಾರೆ.
ಮದುವೆ ಗಂಡು ಮುಕ್ಕ ನಿವಾಸಿ ಜಿತೇಶ್ ಪಕಳ ದೇಣಿಗೆ ಬಾಕ್ಸ್ ಗೆ ನಗದು ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಅಲ್ಲದೇ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರೂ ತಮ್ಮಿಂದ ಕೈಲಾದಷ್ಟು ಸಹಾಯ ಮಾಡ್ಬೇಕು ಅನ್ನೋದು ಜಿತೇಶ್ ಹಾಗೂ ಪ್ರತಿಮಾ ನವದಂಪತಿಯ ಅಭಿಲಾಷೆಯೂ ಆಗಿತ್ತು. ಜಿತೇಶ್ ಪಕಳ ಅವರ ಆಸೆಯಂತೆ ಬಳಿಕ ಮದುವೆ ಸಂಭ್ರಮದಲ್ಲಿ ನೆರೆದಿದ್ದ ಮಂದಿಯೂ ನವದಂಪತಿಗೆ ಶುಭ ಹಾರೈಸುವ ಮುನ್ನ ತಮ್ಮಿಂದಾದಷ್ಟು ದೇಣಿಗೆಯನ್ನು ನೀಡಿ ನವದಂಪತಿ ಮಾನವೀಯ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕೇವಲ ಒಂದು ಗಂಟೆಯಷ್ಟೇ ದೇಣಿಗೆ ಸಂಗ್ರಹಿಸಿದ್ದು 11 ಸಾವಿರ ರೂಪಾಯಿ ಹಣ ಒಟ್ಟು ಸೇರಿವೆ. ಸದ್ಯ ಇದನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿರುವ ಜಿತೇಶ್ ಪಕಳ ಹಾಗೂ ಪ್ರತಿಮಾ ನವದಂಪತಿಯ ಈ ಮಾನವೀಯ ಕಳಕಳಿ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.