ಬಂಟ್ವಾಳ ಆ 21: ಮೊಡಂಕಾಪಿನಲ್ಲಿ ನಡೆದ ದರೋಡೆ ಪ್ರಕರಣ ಇನ್ನು ಮಾಸದಿರುವಾಗಲೇ, ಐವರು ಮುಸುಕುಧಾರಿಗಳ ತಂಡ ಆ. 20ರ ಸೋಮವಾರ ತಡರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಬಂಟ್ವಾಳದ ಲೊರೆಟ್ಟೊಪದವಿನಲ್ಲಿ ನಡೆದಿದೆ.
ಲೊರೆಟ್ಟೊ ಪದವಿನ ಜೆಕಬ್ ರೋಡ್ರೀಗಸ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಜೆಕಬ್ ರೋಡ್ರೀಗಸ್ ಹಾಗೂ ಅವರ ಪುತ್ರಿ ವಾಸವಾಗಿದ್ದರು. ಸೋಮವಾರ ಮಧ್ಯರಾತ್ರಿ 1.30 ಸುಮಾರಿಗೆ ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ ಐವರು ಮುಸುಕುಧಾರಿಗಳ ತಂಡ , ಚಾಕುವಿನಿಂದ ಬೆದರಿಸಿ ಮನೆಮಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ, ಮಾಂಗಲ್ಯ ಸರ, ಮೊಬೈಲ್ , ವಾಚ್ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗಸ್ಟ್ 9 ರಂದು ಮೊಡಂಕಾಪು ನಿವಾಸಿ, ಪ್ರಗತಿಪರ ಕೃಷಿಕ ಜನಾರ್ದನ ಹೊಳ್ಳ ಅವರ ಮನೆಗೆ ನುಗ್ಗಿದ ಅಪರಿಚಿತರಿಬ್ಬರು ಹೊಳ್ಳರ ತಲೆಗೆ ಕತ್ತಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಸುಮಾರು 70 ಸಾ.ರೂ. ಮೌಲ್ಯದ 3 ಪವನ್ ತೂಕದ ಚಿನ್ನದ ಸರವನ್ನು ಕಸಿದುಕೊಂದು ಪರಾರಿಯಾದ ಘಟನೆ ಮಾಸುವ ಮೊದಲೇ ಲೊರೆಟ್ಟೊಪದವಿನ ದರೋಡೆ ಪ್ರಕರಣ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.