ಮಂಗಳೂರು, ಆ 21: ಅತಿಯಾದ ಮಳೆ ಹಾಗೂ ಭೂ ಕುಸಿತದ ಹಿನ್ನಲೆಯಲ್ಲಿ ಕರಾವಳಿಗೆ ಎದುರಾದ ನೈಸರ್ಗಿಕ ಧಿಗ್ಬಂದನದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ. ಕೊಡಗು - ಕೇರಳದಲ್ಲಿ ಆದಂತಹ ಅನಾಹುತಗಳು ಸುಳ್ಯ ತಾಲೂಕು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದೊದಗಿದ್ದರೂ, ಮಂಗಳೂರು- ಬೆಂಗಳೂರು ಹಾಗೂ ಮಂಗಳೂರು- ಕೇರಳ ನಡುವಿನ ಸಂಪರ್ಕ ಕಡಿದು ಹೋಗಿರುವುದು ದೈನಂದಿನ ವ್ಯವಹಾರದ ಹಾಗೂ ವ್ಯಾಪಾರ ವಹಿವಾಟಿಗೆ ಭಾರೀ ಏಟು ಬಿದ್ದಿದೆ. ಮಂಗಳೂರಿನ ಅಕ್ಕ ಪಕ್ಕದ ಜಿಲ್ಲೆಗಳಾದ ಹಾಸನ ಮಡಿಕೇರಿ ಬೆಂಗಳೂರಿಗೆ ಸರಾಗವಾಗಿ ಸಾಗದ ಪರಿಸ್ಥಿತಿ ಇದೆ.
ಭೂ ಕುಸಿತದಿಂದಾಗಿ ಶಿರಾಡಿ ಘಾಟ್ ತಿಂಗಳುಗಳ ಕಾಲ ಮುಚ್ಚಲಾಗಿದೆ. ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತಕ್ಕೆ ಒಳಗಾದ ಸಂಪಾಜೆ ಘಾಟಿ ಸಧ್ಯಕ್ಕೆ ತೆರೆಯುವ ಲಕ್ಷಣವೇ ಕಂಡುಬರುತ್ತಿಲ್ಲ. ಇನ್ನು ಉಳಿದಿರುವ ಚಾರ್ಮಾಡಿ ಘಾಟ್ ನಲ್ಲಿ ಲಘ ವಾಹನ ಹಾಗೂ ಕೆ.ಎಸ್.ಆರ್ ಟಿ.ಸಿ ಕೆಲವು ಬಸ್ ಗಳಿಗೆ ಅವಕಾಶ ನೀಡಲಾಗಿದೆ. ದಕ್ಷಿಣ ಕನ್ನಡಕ್ಕೆ ದಿನಬಳಕೆಯ ತರಕಾರಿ , ಹಣ್ಣು ಹಂಪಲಿನಿಂದ ಹಿಡಿದು, ಅಕ್ಕಿ, ರಾಗಿ, ಗೋಧಿ, ಜೋಳ, ಮೆಣಸು, ಬೆಲ್ಲ ಸಕ್ಕರೆ ಸೇರಿದಂತೆ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ಇತರ ಸಾಮಾಗ್ರಿಗಳು ಶಿರಾಡಿ ಘಾಟ್ ಮೇಲ್ಬಾಗದ ಸಕಲೇಶಪುರ, ಹಾಸನ ಕುಣಿಗಲ್ ಹಾಗೂ ಬೆಂಗಳೂರಿನಿಂದಲೇ ಸರಬರಾಜು ಆಗುತ್ತದೆ. ಘಾಟ್ ಬಂದ್ ನಿಂದ ಸಣ್ಣ ಲಾರಿಗಳಲ್ಲಿ ಇದೀಗ ಅಗತ್ಯ ವಸ್ತುಗಳ ಪೂರೈಕೆಯಾಗುತ್ತಿದೆ.ಅರ್ಧಕ್ಕರ್ಧಷ್ಟು ಪೂರೈಕೆ ಆಗುತ್ತಿಲ್ಲ. ಇನ್ನು ಸೇಲಂ ನಿಂದ ಬರುವ ಕೋಳಿಯೂ ಕೂಡಾ ನಿಂತಿಲ್ಲ. ಕ ರಾವಳಿಯಲ್ಲಿ ತರಕಾರಿ ಹಣ್ಣು ಹಂಪಲು ದಿನಸಿ ಸಾಮಾಗ್ರಿಗಳ ಕೊರತೆ ಶುರುವಾಗಿದೆ.ಇದೇ ಪರಿಸ್ಥಿತಿ ಮುಂದುವರಿದರೆ ಕರಾವಳಿಗರ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ.