ಶಿರ್ವ, ಆ 21: ನರ್ಸ್ ಹೆಝಲ್ ಆತ್ಮಹತ್ಯೆಗೆ ಕಾರಣನಾದ ಸೌದಿ ಪ್ರಜೆಯೂ ವಿಚಾರಣೆಯ ಸಂದರ್ಭ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸೌದಿ ಸರಕಾರದ ಅಲ್ ಮಿಕ್ವಾದ ಸರಕಾರಿ ಆಸ್ಪತೆಯಲ್ಲಿ ನರ್ಸ್ ಆಗಿದ್ದ ಶಿರ್ವ ಮೂಲದ ಹೆಝಲ್ ಸೌದಿಯ ಪ್ರಜೆಯ ಕಿರುಕುಳದಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ಅವರು ಕೊಂಕಣಿ ಹಾಗೂ ಇಂಗ್ಲಿಷ್ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದರು. ಅದರಲ್ಲಿ ಸೌದಿ ಪ್ರಜೆಯ ದೌರ್ಜನ್ಯದ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದರು. ಇದರ ಆಧಾರದಲ್ಲಿಯೇ ಅಲ್ಲಿನ ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದರು. ನ್ಯಾಯಾಲಯದ ತೀರ್ಪಿನಂತೆ ಸೌದಿ ಕಾನೂನಿನ ಪ್ರಕಾರ ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಆತ್ಮಹತ್ಯೆಯ ಪ್ರಕರಣವಾದುದರಿಂದ ತನಿಖೆಗೆ ಪೋಸ್ಟ್ ಮಾರ್ಟಂ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ಪ್ರಕರನದ ತನಿಖೆ ನಡೆದು ವಿಮೆಗೆ ಅಗತ್ಯವಿರುವ ನ್ಯಾಯಾಲಯದ ವರದಿ , ಆಸ್ಪತ್ರೆ ಮತ್ತು ಪೊಲೀಸ್ ವರದಿಗಳು ಸಿದ್ದವಾಗಿದ್ದು, ಅರೇಬಿಕ್ ಭಾಷೆಯಿಂದ ಇಂಗ್ಲೀಷ್ ಗೆ ತರ್ಜುಮೆಯಾಗಿದೆ. ಮೂರು ವಿಮಾನ ಬದಲಾಯಿಸಿ ಊರಿಗೆ ಶವ ರವಾನೆಯಾಗಲಿದೆ. ಇದು ೫ ದಿನಗಳ ಬಕ್ರೀದ್ ರಜೆಯಿಂದಾಗಿ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬವಾಗಲಿದ್ದು ಆಗಸ್ಟ್ ತಿಂಗಳ ಅಂತ್ಯದಲ್ಲಿ ಶವ ರವಾನೆಯಾಗುವ ಸಾಧ್ಯತೆ ಇದೆ.