ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿ ನಗರದ ತಮ್ಮ ನಿವಾಸದ ಎದುರೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದು ತಿಂಗಳೇ ಕಳೆದಿದೆ. ಈ ಹತ್ಯೆ ರಾಜ್ಯದಲ್ಲಷ್ಟೇ ಅಲ್ಲದೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಹತ್ಯೆ ನಡೆದು ತಿಂಗಳು ಕಳೆದರೂ ಇನ್ನು ಹಂತಕ ಬಂಧನವಾಗಿಲ್ಲ. ಮತ್ತು ಈ ಘಟನೆ ಬಗ್ಗೆ ಮೌನವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ತಮಗೆ ನೀಡಿರುವ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡೋ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ನಡೆದ ವನ್ಯಜೀವಿ ಸಪ್ತಾಹ ಕುರಿತ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮನೋಭಾವ ನನಗೆ ನೋವು ತಂದಿದೆ, ಹೀಗಾಗಿ ಸಂದರ್ಭ ಬಂದರೆ ತಮಗೆ ನೀಡಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದರು.