ಕಾಪು, ಆ 20: ಕೈಕಾಲು ತೊಳೆಯಲು ಬಾವಿಯ ಬಳಿ ಹೋಗಿದ್ದ ವ್ಯಕ್ತಿಯೊಬ್ಬರು ಆಯ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕಟಪಾಡಿ ಶ್ರೀಕಾಳಿಕಾಂಬಾ ದೇವಸ್ಥಾನದ ಬಳಿಯ ಕೇರಿ ಎಂಬಲ್ಲಿ ನಡೆದಿದೆ. ಇಲ್ಲಿನ ಭರತ್ ಸೇರಿಗಾರ (58) ಮೃತಪಟ್ಟಿರುವ ವ್ಯಕ್ತಿ.
ಅವರು ಭಾನುವಾರ ಸಂಜೆ 9 ಗಂಟೆಯ ವೇಳೆಗೆ ಕೆಲಸದಿಂದ ಮನೆಗೆ ಹಿಂದಿರುಗಿದ್ದವರು ಸಮೀಪದಲ್ಲಿರುವ ತಮ್ಮನ ಮನೆಗೆ ಹೋಗಿ ನಂತರ ತಮ್ಮ ಮನೆ ಕಡೆಗೆ ಬಂದಿದ್ದರು. ಮೃತರ ತಮ್ಮ ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದಾಗ ಅವರು ಇನ್ನೂ ಮನೆಗೆ ಬಂದಿಲ್ಲದ ವಿಷಯ ತಿಳಿದು ಎಲ್ಲರೂ ಸೇರಿಕೊಂಡು ಹುಡುಕುತ್ತಿದ್ದಾಗ ರಾತ್ರಿ ಹತ್ತು ಗಂಟೆಯ ವೇಳೆಗೆ ಮನೆಯಂಗಳದಲ್ಲಿದ್ದ ಆವರಣವಿಲ್ಲದ ಬಾವಿಯೊಳಗೆ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾವಿಕಟ್ಟೆಯಲ್ಲಿ ಕೈಗೆಟಕುವ ನೀರನ್ನು ಕೈಯಿಂದ ಎತ್ತಿ ಮುಖ ಕೈಕಾಲು ತೊಳೆಯುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.