ಕುಂದಾಪುರ, ಆ 20: “ನಗರಗಳಿಗೆ ಮಾತ್ರ ಸೀಮಿತವಾಗಿದ್ದ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಈಗ ಹಳ್ಳಿಗಳನ್ನೂ ಕಾಡುತ್ತಿದೆ. ಅಲ್ಲಿಯೂ ಅದರ ನಿರ್ವಹಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸಿ. ಕೃಷ್ಣ ಬೈರೆಗೌಡ ಹೇಳಿದ್ದಾರೆ.
ಸೋಮವಾರ ವಂಡ್ಸೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಗ್ರಾಮ ಪಂಚಾಯಿತಿಯ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವನ್ನು ವೀಕ್ಷಿಸಿ, ಅದರ ವಿಸ್ತೃತ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
“ಗ್ರಾಮೀಣ ಪ್ರದೇಶವಾದ ವಂಡ್ಸೆಯಲ್ಲಿ ಸ್ಥಾಪಿಸಿರುವ ಈ ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ತ್ಯಾಜ್ಯವನ್ನು 65 ವಿಧಗಳಾಗಿ ವರ್ಗೀಕರಣ ಮಾಡಲಾಗುತ್ತಿದೆ. ಇದು ಎಲ್ಲೆಡೆ ಕಾರ್ಯ ಸಾಧ್ಯವಲ್ಲ. ವರ್ಗೀಕರಣವನ್ನು ಇನ್ನಷ್ಟು ಸರಳಗೊಳಿಸಿ ಈ ಮಾದರಿಯನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಅಳವಡಿಸಲಾಗುವುದು” ಎಂದು ಅವರು ಹೇಳಿದರು.
ಒಂದೂವರೆ ಗಂಟೆ ಕಾಲ ಘಟಕದ ಸಮಗ್ರ ಮಾಹಿತಿ ಕಲೆಹಾಕಿದ ಸಚಿವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪಿ. ಶ್ರೀನಿವಾಸ ರಾವ್, ಅಭಿವೃದ್ಧಿ ಅಧಿಕಾರಿ ಶಂಕರ ಆಚಾರ್ಯ, ಘಟಕದ ಮೇಲ್ವಿಚಾರಕಿ ವಿಜಯಲಕ್ಷ್ಮೀ ಗ್ರಾಮದ ಅಂಗಡಿ ಮತ್ತು ಮನೆಗಳಿಂದ ತ್ಯಾಜ್ಯ ಸಂಗ್ರಹ, ಸಾಗಾಟ, ವರ್ಗೀಕರಣ, ಸಂಪನ್ಮೂಲವಾಗಿ ಪರಿವರ್ತನೆ, ಮಾರಾಟ ಸೇರಿದಂತೆ ವಿವಿಧ ಹಂತಗಳ ಕುರಿತು ಸಚಿವರಿಗೆ ವಿವರಣೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾದ ಕೆಂಪರಾಜ್, ಭುವನಹಳ್ಳಿ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಉಪಸ್ಥಿತರಿದ್ದರು.