ಮಂಗಳೂರು, ಆ 20: ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಸಾರ್ವಜನಿಕರಿಂದ ಹಗಲು ದರೋಡೆ ನಡೆಯುತ್ತಿದೆ. ಇದಕ್ಕಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಕಲಿ ಅಕೌಂಟ್ ಕಾರ್ಯಾಚರಿಸುತ್ತಿದ್ದು, ಇವುಗಳ ಬಗ್ಗೆ ದೂರು ದಾಖಲಾಗಿದೆ. ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ ಪರಿಹಾರದ ನೆಪ ಮುಂದಿಟ್ಟುಕೊಂಡು ಯಾವುದೇ ಸಂಘ ಸಂಸ್ಥೆ ತನ್ನ ಹೆಸರಿನಲ್ಲಿ ಹಣ ಸಂಗ್ರಹ ಮಾಡುವಂತಿಲ್ಲ ಎಂದು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್, ಅಥವಾ ಡಿಡಿ ಮೂಲಕ ಆರ್ಥಿಕ ನೆರವಿಗೆ ಅವಕಾಶವಿದ್ದು, ಹಣ ನೀಡುವುದಿದ್ರೆ ಸಿಎಂ ಪರಿಹಾರ ನಿಧಿಗೆ ಮಾತ್ರ ಹಣ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯಾವುದೇ ವ್ಯಕ್ತಿ, ಸ್ವಯಂಸೇವಕರು ಅಥವಾ ಸಂಘಟನೆಗಳು ಮತ್ತು ಸಂಸ್ಥೆಗಳು ಸಾರ್ವಜನಿಕರಿಂದ ವಂತಿಗೆ ರೂಪದಲ್ಲಿ ಹಣ ಸಂಗ್ರಹ ಮಾಡುವಂತಿಲ್ಲ. ಒಂದು ವೇಳೆ ಎಚ್ಚರಿಕೆಯನ್ನು ಮೀರಿ ನಿಧಿ ಸಂಗ್ರಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.