ಬೆಂಗಳೂರು, ಆ 20: ಆಗಸ್ಟ್ 22ರಂದು ರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಿದ್ದು, ಈ ಸಂದರ್ಭದಲ್ಲಿ ಬಲಿ ನೀಡಲೆಂದು ಕಾನೂನು ಬಾಹಿರವಾಗಿ ಗೋವುಗಳನ್ನು ಸಾಗಾಟ ಮಾಡುವುದು ಹಾಗೂ ವಧಿಸುವುದನ್ನು ತಡೆಗಟ್ಟಬೇಕು. ಈ ಕುರಿತಾದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಪ್ರಾಣಿಗಳ ಸಾಗಣೆ ಮತ್ತು ವಧೆ ತಡೆಗಟ್ಟಲು, 7 ಅಧಿಕಾರಿಗಳ ಜಿಲ್ಲಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಇನ್ನು ಸಮಿತಿಯ ಸದಸ್ಯರಾಗಿ ಪೊಲೀಸ್ ವರಿಷ್ಟಾಧಿಕಾರಿ, ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ, ಸಾರಿಗೆ ಇಲಾಖೆಯ ಅಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳನ್ನು ನೇಮಿಸಲಾಗಿದೆ ಜತೆಗೆ ನಗರ ಪಾಲಿಕೆ ಮುಖ್ಯಸ್ಥರು, , ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ಬಿಬಿಎಂಪಿ ಅಧಿಕಾರಿಗಳು , ಮಹಾನಗರ ಪಾಲಿಕೆ ಅಧಿಕಾರಿಗಳು ಸಮಿತಿ ಕಾರ್ಯದರ್ಶಿಯಾಗಿತ್ತಾರೆ. ಕಾನೂನು ಬಾಹಿರವಾಗಿ ಗೋವು, ಒಂಟೆಗಳನ್ನು ಸಾಗಾಣೆ ಮತ್ತು ವಧೆ ಮಾಡುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಮಿತಿಗೆ ಸರ್ಕಾರ ಸೂಚಿಸಿದೆ.