ಹಾಸನ, ಆ20: ರಾಜ್ಯದಲ್ಲಿ ಸೂಪರ್ ಸಿಎಂ ಎಂದೇ ಬಿಂಬಿತರಾಗಿರುವ ಸಚಿವ ಎಚ್.ಡಿ.ರೇವಣ್ಣ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭ ಅವರು ಪ್ರಾಣಿಗಳಿಗೆ ಎಸೆದಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವುದು ಇದೀಗ ವ್ಯಾಪಕ ಆಕ್ರೋಶ ಹಾಗೂ ಟೀಕೆಗೆ ಕಾರಣವಾಗಿದೆ.
ಕೊಡಗಿನ ಜನ ಧೈರ್ಯಶಾಲಿಗಳು ಹಾಗೂ ಸ್ವಾಭಿಮಾನಕ್ಕೆ ಹೆಸರು ವಾಸಿಯಾದವರು. ದೇಶಕ್ಕೆ ಯೋಧರನ್ನು ಕೊಡುಗೆಯಾಗಿ ನೀಡಿದಂತವರು. ಆದರೆ ಪ್ರಾಕೃತಿಕ ವಿಕೋಪದಿಂದ ಕೊಡಗು ಜನ ಜೀವನ ಸಂಕಷ್ಟದಲ್ಲಿದ್ದಾರೆ. ಆದರೆ ಹಾಸನದಲ್ಲಿರುವ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಕೊಡಗು ಪ್ರವಾಹದ ನಿರಾಶ್ರಿತರಿಗೆ ತಿಂಡಿ, ತಿನಿಸುಗಳನ್ನು ಎಸೆಯುವ ಮೂಲಕ ಮಾನವೀಯತೆ ಮರೆತಂತೆ ವರ್ತಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಹಾಸನದ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಪಿಡಬ್ಲ್ಯುಡಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಶನಿವಾರ ಶಾಸಕ ಎಟಿ ರಾಮಸ್ವಾಮಿ ಅವರ ಜೊತೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಿರಾಶ್ರಿತರು ತಮ್ಮ ಸಂಕಷ್ಟಗಳನ್ನು ಸಚಿವರ ಬಳಿ ಹೇಳಲು ಮುಂದಾಗಿದ್ದಾರೆ. ಆದರೆ ಅದ್ಯಾವುದನ್ನು ಅಲಿಸದ ಸಚಿವ ರೇವಣ್ಣ ತಾವು ಮುಂಚೆಯೇ ತಂದಿದ್ದ ಒಂದು ಬಾಕ್ಸ್ ಬಿಸ್ಕತ್ ನ್ನು ಸಂತ್ರಸ್ತರಿಗೆ ಎಸೆಯತೊಡಗಿದ್ದಾರೆ. ಅವರ ಸಮಸ್ಯೆ ಆಲಿಸದೆ ಕಾಟಾಚಾರಕ್ಕಾಗಿ ಬಿಸ್ಕೆಟ್ ಅನ್ನು ಪ್ರಾಣಿಗಳಿಗೆ ಎಸೆಯುವಂತೆ ಎಸೆದಿದ್ದಾರೆ ಎಂದು ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.