ಮಂಗಳೂರು, ಆ 20: ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಿದ ಗುಂಪೊಂದು ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಆ 19 ರ ಭಾನುವಾರ ಬಜ್ಪೆಯ ಗುರುಕಂಬಳ ಬಳಿ ನಡೆದಿದೆ. ಕಾಟಿಪಳ್ಳದ ಹಂಝ (63) ಎಂಬ ವ್ಯಕ್ತಿ ಗುಂಪಿನಿಂದ ಥಳಿತಕ್ಕೊಳಗಾದವರು. ಹಂಝ ಸಾಲದ ವಿಚಾರದಲ್ಲಿ ಕೈಕಂಬದ ಗುರುಕಂಬಳಕ್ಕೆ ಸ್ನೇಹಿತನೊಂದಿಗೆ ತೆರಳಿದ್ದರು. ನೋಂದಣಿಯಾಗದ ಹೊಸ ಆ್ಯಕ್ಟಿವಾ ವಾಹನದಲ್ಲಿ ಹೋಗಿದ್ದ ಅವರು ಈ ವಿಚಾರವಾಗಿ ಸ್ನೇಹಿತನೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭ ಹಂಝ ಕಿಸೆಯಲ್ಲಿದ್ದ ಚಾಕಲೇಟ್ ಅಲ್ಲೇ ಆಟವಾಡುತ್ತಿದ್ದ ಮಕ್ಕಳಿಗೆ ನೀಡಲು ಮುಂದಾಗಿದ್ದಾರೆ.
ಈ ಸಂದರ್ಭ ಅಲ್ಲಿ ಗೊಂದಲದ ವಾತಾವರಣ ಉಂಟಾಗಿ ಮುಸ್ತಾಫ ಅಜ್ಮಲ್ ನೇತೃತ್ವದ ತಂಡ ಇವರನ್ನು ವಿಚಾರಿಸಲು ಮುಂದಾಗಿದೆ, ಇದರಿಂದ ಗಾಬರಿಯಾದ ಹಂಝ ಅವರ ಸ್ನೇಹಿತ ಪರಾರಿಯಾಗಿದ್ದಾರೆ. ಇದು ಅಲ್ಲಿ ಸೇರಿದ್ದ ಗುಂಪಿನ ಆಕ್ರೋಶಕ್ಕೆ ಕಾರಣವಾಗಿ ಹಂಝ ಅವರನ್ನು ಕಟ್ಟಿ ಹಾಕಿ ಮಕ್ಕಳ ಕಳ್ಳನೆಂದು ದಾಳಿ ನಡೆಸಿದ್ದಾರೆ. ಘಟನೆ ಬಗ್ಗೆ ಅರಿತು, ಬಜ್ಪೆ ಠಾಣಾ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಹಂಝ ಅವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಘಟನೆ ಬಗ್ಗೆ ಬಜ್ಪೆ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.