ಮಂಗಳೂರು, ಆ 20: ಕೊಡಗಿನಲ್ಲಿ ಪುನರ್ವಸತಿ ದೊಡ್ದ ಸವಾಲು , ಇನ್ನೂ 150 ಮಂದಿ ವಿವಿಧೆಡೆಯಿಂದ ಸಿಲುಕಿರುವ ಶಂಕೆಯಿದೆ. ನೌಕಪಡೆ, ವಾಯುಸೇವೆ, ಎನ್ ಡಿ ಆರ್ ಎಫ್ ಪೊಲೀಸರು ರಾತ್ರಿ ಹಗಲೆನ್ನದೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೋಡುಪಾಲ ಸಂತ್ರಸ್ತರ ಪುನರ್ವಸತಿ ಕೇಂದ್ರ ಹೊರತುಪಡಿಸಿ ಜಿಲ್ಲಾದ್ಯಂತ 38 ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ಜನರ ಸ್ಥಳಾಂತರ ಕೇಂದ್ರ ಮುಂದುವರಿದಿದೆ, ಮಳೆ ಸಂಪೂರ್ಣ ನಿಂತ ಬಳಿಕವಷ್ಟೇ ಪುನರ್ವಸತಿ ಕುರಿತಂತೆ ಕಾರ್ಯಯೋಜನೆ ತಯಾರಿಸಲು ಸಾಧ್ಯ ಎಂದು ಕಂದಾಯ ಸಚಿವ ಆರ್.ದೇಶಪಾಂಡೆ ತಿಳಿಸಿದ್ದಾರೆ.
ಇದಕ್ಕೂ ಮೊದಲು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಜೋಡುಪಾಲ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವರು, ಘಟನಾ ಸ್ಥಳವನ್ನು ವೀಕ್ಷಿಸಿದರು. ಬಳಿಕ ಸಂತ್ರಸ್ತರು ಆಶ್ರಯ ಪಡೆದಿರುವ ಸಂಪಾಜೆ ಸರ್ಕಾರಿ ಶಾಲೆ, ಕಲ್ಲುಗುಂಡಿ ಸರ್ಕಾರಿ ಶಾಲೆ ಹಾಗೂ ಅರಂತೋಡು ತೆಕ್ಕಿಲ್ ಹಾಲ್ಗೆ ಭೇಟಿ ನೀಡಿದ್ದರು.ಸಂತ್ರಸ್ತರು ಉಳಿದುಕೊಂಡಿರುವ ಎಲ್ಲಾ ಕೊಠಡಿಗಳಿಗೂ ಭೇಟಿ ನೀಡಿದ ಸಚಿವ ದೇಶಪಾಂಡೆ, ಅವರ ಅಹವಾಲನ್ನು ಆಲಿಸಿದರು. ಸಂತ್ರಸ್ತರ ವೈದ್ಯಕೀಯ ವ್ಯವಸ್ಥೆ, ಆಹಾರ ತಯಾರಿಕಾ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಅರಂತೋಡಿನಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ದೇಶಪಾಂಡೆ, ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ. ಸಂತ್ರಸ್ತರನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ, ಅವರಲ್ಲಿ ನೆಮ್ಮದಿ ಮೂಡಿಸಲಾಗುವುದು. ಅವರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಪರಿಹಾರವನ್ನು ತ್ವರಿತವಾಗಿ ನೀಡಲಾಗುವುದು. ಮನೆ ಕಳೆದುಕೊಂಡವರಿಗೆ ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.ಪುನರ್ವಸತಿ ಕೇಂದ್ರದಲ್ಲಿರುವ ಶಾಲಾ ಮಕ್ಕಳಿಕೆ ಪಕ್ಕದಲ್ಲಿರು ಶಾಲೆಗಳಿಗೆ ತಾತ್ಕಾಲಿಕ ಸೇರ್ಪಡೆಗೊಳಿಸಲು ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದರು.
ಪಶ್ಚಿಮ ಘಟ್ಟದಲ್ಲಿ ಉಂಟಾಗಿರುವ ಭೂ ಕುಸಿತ , ಪ್ರಕೃತಿ ವಿಕೋಪಕ್ಕೆ ಕಾರಣ ಕಂಡುಹುಡುಕುವ ಸಲುವಾಗಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತಜ್ಞರ ಸಮಿತಿಯನ್ನು ನೇಮಿಸುವ ಬಗ್ಗೆ ತೀರ್ಮಾನಿಸಲಾಗುವುದು.ಘಟನೆಗಳಿಗೆ ನಿರ್ದೆಷಟ ಕಾರಣವೇನು ಯಾವ ರೀತಿಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬಹುದು ಎಂಬುವುದನ್ನು ತಜ್ಞರ ತಂಡ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಹೇಳಲಾಗುವುದು ಎಂದು ಸಚಿವ ದೇಶಪಾಂಡೆ ತಿಳಿಸಿದರು. ಪರಿಹಾರ ಕಾರ್ಯಗಳಿಗಾಗಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಗೆ 50 ಕೋಟಿ ರೂ. ಹಾಗೂ ಕೊಡಗು ಜಿಲ್ಲೆಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನದ ನೆರವು ನೀಡಲಾಗುವುದು ಎಂದು ಸಚಿವ ದೇಶಪಾಂಡೆ ಅಭಯ ನೀಡಿದರು.