ಬೆಳ್ತಂಗಡಿ, ಆ 20: ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂಘಟನೆಯಾಗಿರುವ ಕೆ.ಎಸ್.ಎಂ.ಸಿ.ಎ ವತಿಯಿಂದ ಸಂಗ್ರಹಿಸಲಾಗಿದ್ದ ಪರಿಹಾರ ಸಾಮಾಗ್ರಿಗಳನ್ನು ಸಾಗಿಸಲಾಯಿತು. ಸಾಮಾಗ್ರಿಗಳ ಸಾಗಾಟದ ವಾಹನಗಳಿಗೆ ಬೆಳ್ತಂಗಡಿಯ ಸೈಂಟ್ ಲಾರೆನ್ಸ್ ಪ್ರಧಾನ ದೇವಾಲಯದ ಮುಂಭಾಗದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಲಾರೆನ್ಸ್ ಮುಕ್ಕುಝಿ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ಸೀರೋಮಲಬಾರ್ ಕಥೋಲಿಕ್ ಧರ್ಮಪ್ರಾಂತ್ಯದ ಕೆ.ಎಸ್.ಎಂಸಿಎ ಸಂಘಟನೆಯ ವತಿಯಿಂದ ಕೊಡಗು ಜಿಲ್ಲೆಯ ಸಂತ್ರಸ್ಥರಿಗಾಗಿ ಈಗಾಗಲೆ ಆಹಾರ ಹಾಗೂ ಇತರೆ ಸಾಮಾಗ್ರಿಗಳನ್ನು ನೀಡಲಾಗಿದ್ದು ಇದೀಗ ಕೇರಳದ ಸಂತ್ರಸ್ಥರಿಗಾಗಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಆಹಾರ ಪದಾರ್ಧಗಳು ಹಾಗೂ ಬಟ್ಟೆ, ಸೋಪು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲಾಗಿರುವುದಾಗಿ ತಿಳಿಸಿದರು. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಅದನ್ನು ಇಲ್ಲಿ ಎಲ್ಲರೂ ಸೇರಿ ಮಾಡಿದ್ದಾರೆ ಎಂದರು.