ಬೆಳ್ತಂಗಡಿ, ಆ 19: ರಸ್ತೆ ಅಪಘಾತವೊಂದರಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಬೆಳ್ತಂಗಡಿಯ ವೇಣೂರು ಠಾಣಾ ವ್ಯಾಪ್ತಿಯ ಅಂಡಿಂಜೆ ಎಂಬಲ್ಲಿ ಭಾನುವಾರ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ನೈನಾಡು ಬರಿಮಾರು ನಿವಾಸಿ ದಿ. ಸಂಜೀವ ಶೆಟ್ಟಿಯವರ ಪುತ್ರ ಅಶ್ವಿತ್ ಶೆಟ್ಟಿ (25) ಎಂದು ಗುರುತಿಸಲಾಗಿದೆ.
ಅಶ್ವಿತ್ ಅವರ ಮನೆ ಸಮೀಪದಲ್ಲಿ ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮ ನಡೆದಿತ್ತು. ಇಲ್ಲಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಅಶ್ವಿತ್ ಶೆಟ್ಟಿ ಅವರು ಅಂಡಿಂಜೆಗೆ ಬಿಟ್ಟು ಬರಲು ಬೈಕ್ನಲ್ಲಿ ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದ ವೇಳೆ ತಿರುವಿನಲ್ಲಿ ಬರುತ್ತಿದ್ದ ಕೇರಳದ ಜೋಸ್ ಎಂಬುವರಿಗೆ ಸೇರಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ಸೊಂಟದ ಭಾಗಕ್ಕೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಇದೀಗ ಸಂಬಂಧಿಕರ ಮದುವೆ ಮನೆಯಲ್ಲಿ ಶೂತಕದ ಛಾಯೆ ಆವರಿಸಿದೆ. ಕಾರು ಚಾಲಕನ ವಿರುದ್ಧ ಅಜಾಗೂರಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಅಶ್ವಿತ್ ಶೆಟ್ಟಿ ಜಯಶ್ರೀಯವರಿಗೆ ಒಬ್ಬನೇ ಪುತ್ರನಾಗಿದ್ದರು. ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಮನೆಯ ಸಂಪೂರ್ಣ ನಿರ್ವಹಣೆ ಅಶ್ವಿತ್ ಶೆಟ್ಟಿ ಅವರ ಮೇಲಿತ್ತು. ಆದರೆ ಇದೀಗ ಪುತ್ರನನ್ನು ಕಳೆದುಕೊಂಡ ಜಯಶ್ರೀ ಅವರ ಆಕ್ರಂದನ ಮುಗಿಲು ಮುಟ್ಟಿದೆ.