ಹಾಸನ,19 : ಇನ್ನು ಐದು ತಿಂಗಳು ಶಿರಾಡಿ ಘಾಟ್ ಬಂದ್ ಆಗಿರಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. ಈ ಬಗ್ಗೆ ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಚಿವರು, ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಕಾಮಗಾರಿಯೇ ಕೊಚ್ಚಿ ಹೋಗುವ ಭೀತಿ ನಿರ್ಮಾಣವಾಗಿದೆ.
ಅಲ್ಲದೆ ರಸ್ತೆಯ ಎರಡು ಕಡೆ ಕೆಲಸಗಳೂ ಕೂಡ ಪೂರ್ಣಗೊಂಡಿಲ್ಲ. ಈಗಾಗಲೇ ಸಂಚಾರ ನಿಷೇಧಗೊಳಿಸಲಾಗಿದ್ದು, ಒಂದು ವೇಳೆ ಸಂಚಾರ ಮುಕ್ತಗೊಳಿಸಿದರೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಉಳಿದ ಕಾಮಗಾರಿಗಳನ್ನು ಪೂರೈಸಿ ಬಳಿಕ ಸಂಚಾರ ಮುಕ್ತಗೊಳಿಸಲಾಗುತ್ತದೆ. ಇದಕ್ಕೆ ಐದು ತಿಂಗಳು ಬೇಕಾಗಬಹುದು ಎಂದು ಹೇಳಿದ್ದಾರೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾನ್ಯತೆ ಸರ್ಟಿಫಿಕೇಟ್ ನೀಡಿದ ಬಳಿಕವೇ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.