ಕೊಡಗು, ಆ 19: ಶನಿವಾರವಷ್ಟೇ ನೆರೆಪೀಡಿತ ಜಿಲ್ಲೆ ಕೊಡಗಿನಲ್ಲಿ ಕೇವಲ 5 ನಿಮಿಷಗಳ ವೈಮಾನಿಕ ಸಮೀಕ್ಷೆ ನಡೆಸಿ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾನುವಾರ ಮತ್ತೊಮ್ಮೆ ಕೊಡಗಿನ ಜಲಪ್ರಳಯವನ್ನು ವೈಮಾನಿಕ ಸಮೀಕ್ಷೆಯ ಮೂಲಕ ಒಂದು 15 ನಿಮಿಷಗಳ ಕಾಲ ವೀಕ್ಷಿಸಿದರು. ಮೈಸೂರು ವಿಮಾನ ನಿಲ್ದಾಣದಿಂದ ಹೊರಟ ಸಿಎಂ ಸೋಮವಾರಪೇಟೆ, ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು.
ಇನ್ನು ಕೊಡಗಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮಳೆಯ ಅವಾಂತರದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದವರನ್ನು ಎನ್ಡಿಆರ್ಎಫ್ ತಂಡ ಮತ್ತು ಸೇನಾ ಸಿಬ್ಬಂದಿ ರಕ್ಷಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಭೇಟಿ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಲಿಕಾಪ್ಟರ್ ಮೂಲಕ 1 ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಪಿರಿಯಾಪಟ್ಟಣದ ಬಳಿ ಇರುವ ಹೆಲಿಪ್ಯಾಡ್ನಲ್ಲಿ ಇಳಿದು ರಸ್ತೆ ಮೂಲಕ ಕುಮಾರಸ್ವಾಮಿ ಮಡಿಕೇರಿಗೆ ಪ್ರಯಾಣಿಸಿದರು. ದಾರಿ ಮಧ್ಯೆ ಹಾನಿಗೊಳಗಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು.