ಚಿಕ್ಕಮಗಳೂರು, ಆ.19: ದಕ್ಷಿಣ ಕನ್ನಡ , ಕೊಡಗು ಸುರಿಯುತ್ತಿರುವ ಭಾರೀ ಮಳೆಗೆ ಭೂ ಕುಸಿತದಿಂದಾಗಿ ಶಿರಾಡಿ ಘಾಟ್ ಬಂದ್ ಆಗಿದ್ದರೆ, ಅತ್ತ ಅನಿವಾರ್ಯವಾಗಿ ಪ್ರಯಾಣಿಸಬೇಕಾದ ಚಾರ್ಮಾಡಿ ಘಾಟ್ ಸ್ಥಿತಿಯೂ ಅಪಾಯಕಾರಿ ಸನ್ನಿವೇಶದಲ್ಲಿದೆ. ಇನ್ನೊಂದೆಡೆ ಚಿಕ್ಕಮಗಳೂರು ಮತ್ತು ಮಲೆನಾಡಿನಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯ ಹೆದ್ದಾರಿ 66ರಲ್ಲಿ 4 ಕಡೆಗಳಲ್ಲಿ ಭೂಕುಸಿದಿದ್ದು, ಇದರ ಪರಿಣಾಮವಾಗಿ ಕಳಸ- ಮಂಗಳೂರು ನಡುವೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಪರಿಣಾಮವಾಗಿ ಮುಂದೆ ಹೋಗಲಾರದೆ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯಲ್ಲಿ ಬಿದ್ದಿರುವ ರಾಶಿರಾಶಿ ಮಣ್ಣನ್ನು ಕುದುರೆಮುಖ ಠಾಣಾ ಪೊಲೀಸರು ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಧಾರಾಕಾರ ಮಳೆಯಿಂದಾಗಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯವಸ್ತಗೊಂಡಿದ್ದು, ದಕ್ಷಿಣ ರೈಲ್ವೆ ಬಹುತೇಕ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಪಾಲ್ಘಾಟ್ ಮತ್ತು ತಿರುವನಂತಪುರ ವಿಭಾಗಗಳಲ್ಲಿ ಮಣ್ಣು ಕುಸಿತ ಹಾಗೂ ನೆರೆ ಸ್ಥಿತಿಯಿಂದಾಗಿ ನಾಲ್ಕು ದಿನಗಳಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗುತ್ತಿದ್ದು, ಇತ್ತ ಬಸ್ ಪ್ರಯಾಣವೂ ಇಲ್ಲದೇ, ಅತ್ತ ರೈಲು ಸಂಚಾರವೂ ಇಲ್ಲದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನ ಮೂಲಕ ಹಾದು ಹೋಗುವ ಬಹುತೇಕ ರೈಲುಗಳು ಕೇರಳದ ಮೂಲಕ ತಮಿಳುನಾಡಿಗೆ ಸಂಚರಿಸುತ್ತಿದ್ದು, ಕೇರಳ, ತಮಿಳುನಾಡಿಗೆ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.