ಉಡುಪಿ, ಆ 19: ಶಿರೂರು ಶ್ರೀ ಅಭಿಮಾನಿಗಳ ಸಮಿತಿ ವತಿಯಿಂದ ನಡೆದ, ಶಿರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆ, ಉಡುಪಿಯ ಮಥುರಾ ಕಂಫರ್ಟ್ಸ್ ಸಭಾಂಗಣದಲ್ಲಿ ಆ.18 ರ ಶನಿವಾರ ನಡೆಯಿತು. ಈ ವೇಳೆ ಮಾತನಾಡಿದ ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ , ಬಾಲ ಕಾರ್ಮಿಕತನ, ಬಾಲ್ಯ ವಿವಾಹ, ನಿಷೇಧಿಸಿದ ಹಿನ್ನಲೆಯಲ್ಲಿ ಮಠಗಳಲ್ಲಿ ಬಾಲ ಸನ್ಯಾಸ ಕೊಟ್ಟರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.
ಇದೇ ವೇಳೆ ಶಿರೂರು ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿ ತಿಂಗಳು ಕಳೆದರೂ ಪೊಲೀಸರ ಕೈಸೇರಿಲ್ಲ. ದೇಶದ ಗಮನ ಸೆಳೆದ ಪ್ರಕರಣ ಆದರೂ ವರದಿ ಇನ್ನೂ ಬಂದಿಲ್ಲ. ಮಣಿಪಾಲ ಕೆಎಂಸಿ ವೈದ್ಯರು ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಎಫ್ಎಸ್ಎಲ್ ವರದಿ ತಡವಾದಷ್ಟು ಪ್ರಕರಣದ ದಿಕ್ಕು ಬದಲಾಗುವ ಸಾಧ್ಯತೆಯಿದೆ ಎಂದು ಕ್ರಿಮಿನಲ್ ವಕೀಲ, ಶಿರೂರು ಶ್ರೀ ಆಪ್ತ ರವಿಕಿರಣ್ ಮುರ್ಡೇಶ್ವರ ಸಂಶಯ ವ್ಯಕ್ತಪಡಿಸಿದರು.
ಬಳಿಕ ಶಿರೂರು ಸ್ವಾಮೀಜಿ ಅವರ ಭಾವಚಿತ್ರವನ್ನು ಅಷ್ಟಮಠಗಳಿರುವ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯ್ತು. ಶಿರೂರು ಮಠದ ಒಳಗೆ ಸ್ವಾಮೀಜಿಯವ ಭಾವಚಿತ್ರ ಕೊಂಡೊಯ್ದು ಪುಷ್ಪ ನಮನ ಸಲ್ಲಿಸಲು ಶಿರೂರು ಶ್ರೀ ಅಭಿಮಾನಿಗಳು ಇಚ್ಚೆ ವ್ಯಕ್ತಪಡಿಸಿದ್ದರೂ, ದ್ವಂದ್ವ ಸೋದೆ ಮಠ ಮತ್ತು ಶಿರೂರು ಮಠದ ಮೇಲ್ವಿಚಾರಣಾ ಸಮಿತಿಯವರು, ಮಠದೊಳಗೆ ಪ್ರವೇಶಿಸಿ ಪುಷ್ಪನಮನ ಸಲ್ಲಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಮಠದ ಮುಚ್ಚಿದ ಬಾಗಿಲ ಬಳಿಯಿದ್ದ ಜಗಲಿಯಲ್ಲಿ ಭಾವಚಿತ್ರವಿಟ್ಟು ದೀಪ ಬೆಳಗಿ ಪುಷ್ಪ ನಮನ ಸಲ್ಲಿಸಿಲಾಯಿತು. ಬಳಿಕ ಮಾತನಾಡಿದ ಕೇಮಾರು ಸಾಂದೀಪನಿ ಮಠಾಧೀಶ ಈಶ ವಿಠಲದಾಸ ಸ್ವಾಮೀಜಿ , ಶಿರೂರು ಸ್ವಾಮೀಜಿ ಮೂರು ಪರ್ಯಾಯ ಸಹಿತ 47 ವರ್ಷ ಕೃಷ್ಣನ ಪೂಜೆಯನ್ನು ಮಾಡಿದ್ದವರು. ಶಿರೂರು ಮಠದ ಬಾಗಿಲು ಭಕ್ತ ಜನರಿಗೆ ಸದಾ ತೆರೆದಿತ್ತು. ಇಂದು ಸ್ವಾಮೀಜಿಯ ಭಾವಚಿತ್ರ ಪ್ರವೇಶಕ್ಕೆ ಮಠದ ಬಾಗಿಲು ಮುಚ್ಚಿದೆ. ಮಠದ ಒಳಗೆ ಪುಷ್ಪನಮನಕ್ಕೆ ನಮಗೆ ಅವಕಾಶ ಸಿಗಲಿಲ್ಲ. ಇದು ಸಾಧು ಪರಂಪರೆಗೆ ಮಾಡಿದ ಅವಮಾನ. ಉದಾರತೆಯಿಂದ ಶಿರೂರು ಮಠದ ಬಾಗಿಲು ತೆಗೆಯಬೇಕಿತ್ತು ಎಂದರು.