ಸುಬ್ರಹ್ಮಣ್ಯ, ಆ 19: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮತ್ತು ಘಟ್ಟಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿದ ಬಾರೀ ಮಳೆಯಿಂದಾಗಿ ಬಿಸ್ಲೆ ಗಡಿಯ ಶ್ರೀ ಗಡಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತೊರೆಯಲ್ಲಿ ಬೃಹತ್ ಗಾತ್ರದ ನೂರಾರು ಮರದ ದಿಮ್ಮಿಗಳು ಕೊಚ್ಚಿ ಬಂದಿತ್ತು.ಇವುಗಳನ್ನು ಶನಿವಾರ ಕುಲ್ಕುಂದ ಮತ್ತು ಸುಬ್ರಹ್ಮಣ್ಯದ ನೂರಕ್ಕೂ ಅಧಿಕ ಗ್ರಾಮಸ್ಥರು ಶ್ರಮದಾನದ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಭಾರೀ ಮಳೆಯ ಕಾರಣದಿಂದಾಗಿ ಮೇಲ್ಭಾಗದ ಸುಮಾರು ಮೂರು ಕಿ.ಮೀ ದೂರದಲ್ಲಿ ಭೂಕುಸಿತ ಉಂಟಾಗಿ ಬಾರೀ ಪ್ರವಾಹದೊಂದಿಗೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂತು.ಮರಗಳು ಗುಡಿಯ ಸಮೀಪದ ಸೇತುವೆಯ ತಡೆಗೋಡೆಗೆ ತಾಗಿ ನಿಂತಿದ್ದವು.ಕೆಲವೊಂದು ಬೃಹತ್ ಮರಗಳು ಸಂಪೂರ್ಣವಾಗಿ ರಸ್ತೆಯನ್ನು ಆಕ್ರಮಿಸಿತ್ತು.ಇದರಿಂದಾಗಿ ಹೊಳೆನರಸಿಪುರ-ಬಿಸ್ಲೆ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಇಂತಹ ಬೃಹತ್ ದಿಮ್ಮಿಗಳನ್ನು ಕುಲ್ಕುಂದ ಮತ್ತು ಸುಬ್ರಹ್ಮಣ್ಯದ ನೂರಾರು ನಾಗರೀಕರು ಶ್ರಮಸೇವೆ ಮಾಡಿ ಬೃಹತ್ ದಿಮ್ಮಿಗಳನ್ನು ತೆರವುಗೊಳಿಸಿದರು. ಅಸಾಧ್ಯವಾದ ಮರಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.
ಗಡಿ ದೇವಳದ ಸಮೀಪ ಬಿಸ್ಲೆ-ಸುಬ್ರಹ್ಮಣ್ಯ ನೂತನ ರಸ್ತೆಯ ಮೇಲೆ ಮಳೆಯಿಂದಾಗಿ ಬಾರಿ ಪ್ರವಾಹ ಹರಿದುದರಿಂದ ಮೊಣಕಾಲಿನಷ್ಟು ದಪ್ಪದಲ್ಲಿ ಕೆಸರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಕೆಸರನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ಕುಕ್ಕೆಯ ಗ್ರಾಮಸ್ಥರು ಗಡಿ ಪ್ರದೇಶದಲ್ಲಿ ನಡೆಸುತ್ತಿದ್ದ ಶ್ರಮದಾನ ಸೇವೆಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.ಅಲ್ಲದೆ ಸುಬ್ರಹ್ಮಣ್ಯದ ಹೋಟೇಲ್ ರಾಘವೇಂದ್ರ ಮತ್ತು ನಿಯೋ ಮೈಸೂರು ಕೆಫೆ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೆ ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಜೆಸಿಬಿ ವ್ಯವಸ್ಥೆ ನೀಡಲಾಗಿತ್ತು.