ನವದೆಹಲಿ, ಆ.18: ಜಲ ಪ್ರಳಯದಿಂದ ತತ್ತರಿಸಿ ಹೋಗಿರುವ ಕೇರಳದ ಜನರ ಹೋರಾಟದ ಛಲಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯ ನಂತರ ನರೇಂದ್ರ ಮೋದಿ ಸರಣಿ ಟ್ವೀಟ್ ಪ್ರಕಟಿಸಿದ್ದಾರೆ. ಕೇರಳದಾದ್ಯಂತ ನಿಲ್ಲದ ಪ್ರವಾಹದಿಂದಾಗಿ ತಮ್ಮ ಜೀವನವನ್ನು ಕಳೆದುಕೊಂಡವರ ಕುಟುಂಬಗಳು ನನ್ನ ಮೊದಲ ಆಲೋಚನೆ. ಗಾಯಗೊಂಡವರು ಶೀಘ್ರದಲ್ಲಿಯೇ ಚೇತರಿಕೆಗೊಳ್ಳಲಿ ಎಂದು ಆಶಿಸುತ್ತೇನೆ. ಜೊತೆಗ ನಾವು ಕೇರಳದ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಕೇರಳದ ಜನರ ಹೋರಾಟದ ಛಲಕ್ಕೆ ಅಭಿನಂದನೆ. ಇಂತಹ ಕಠಿಣ ಸಂದರ್ಭದಲ್ಲಿ ಕೇರಳ ರಾಜ್ಯಕ್ಕೆ ಇಡೀ ದೇಶವು ಬೆಂಬಲವಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅಧಿಕಾರಿಗಳ ಪ್ರಯತ್ನಗಳಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಇಂತಹ ಕಠಿಣ ಸಂದರ್ಭದಲ್ಲಿ ದೇಶದಾದ್ಯಂತ ಕೇರಳ ಜನರಿಗೆ ದೊರೆಯುತ್ತಿರುವ ಬೆಂಬಲ ಹಾಗೂ ಐಕ್ಯತೆಯನ್ನು ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.