ಅಬುಧಾಬಿ, ಆ.18: ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದ ಸಂತ್ರಸ್ತ ಜನತೆಗೆ ನೆರವಾಗಲು ಸಮಿತಿಯೊಂದನ್ನು ಯು.ಎ.ಇ ರಚಿಸಿದೆ. ಕೇರಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದೇಶ ಮಾತ್ರವಲ್ಲದೆ ವಿಶ್ವದ ಗಮನಕ್ಕೂ ಬಂದಿದ್ದು, ಪ್ರವಾಹ ಪೀಡಿತ ಕೇರಳಕ್ಕೆ ನೆರವು ನೀಡುವುದಾಗಿ ಯು.ಎ.ಇ ಸರ್ಕಾರ ಘೋಷಿಸಿದೆ.
ಈ ಬಗ್ಗೆ ಸ್ವತಃ ಯು.ಎ.ಇ ಅದ್ಯಕ್ಷರಾದ ಶೇಖ್ ಖಲೀಫಾ ಅವರು ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಯು.ಎ.ಇ ಉಪಾಧ್ಯಕ್ಷ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಕೂಡ ಟ್ವೀಟ್ ಮಾಡಿದ್ದಾರೆ. ಯುಎಇ ಅದ್ಯಕ್ಷರು ಕೇರಳ ನಿರಾಶ್ರಿತರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸಂತ್ರಸ್ತರ ನೆರವಿಗೆ ಸಮಿತಿಯನ್ನು ರಚನೆ ಮಾಡುವಂತೆಯೂ ಸೂಚಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಯುಎಇ ಉಪಾಧ್ಯಕ್ಷ ಶೇಖ್ ಮೊಹಮದ್ ಬಿನ್ ರಷೀದ್ ಅಲ್ ಮಕ್ತೌಮ್, ಕೇರಳಕ್ಕೆ ಸಂಬಂಧಿಸಿದಂತೆ ನಮ್ಮ ರಾಷ್ಟ್ರ ವಿಶೇಷ ಕಾಳಜಿ ಹೊಂದಿದೆ. ಪ್ರವಾಹ ಪೀಡಿತ ಕೇರಳ ಸಂಕಷ್ಟದಲ್ಲಿದ್ದು, ನೆರವು ನೀಡುವುದು ನಮ್ಮ ಕರ್ತವ್ಯ. ಕೇರಳ ನಮ್ಮ ಯಶಸ್ಸಿನ ಮೂಲ ಎಂದು ಅವರು ಹೇಳಿದ್ದಾರೆ.
ಈಗಲೂ ಯು.ಎ.ಇ ಯಶೋಗಾಥೆಯಲ್ಲಿ ಕೇರಳದ ಜನತೆ ಒಂದು ಭಾಗವಾಗಿದ್ದಾರೆ. ಸಂತ್ರಸ್ತರಿಗೆ ನೆರಗುವುದು ನಮ್ಮ ವಿಶೇಷ ಜವಾಬ್ದಾರಿ. ಯುಎಇ ಭಾರತೀಯ ಸಮುದಾಯ ಸಂತ್ರಸ್ತರಿಗೆ ನೆರವಾಗುವಲ್ಲಿ ಪರಸ್ಪರ ಕೈಜೋಡಿಸಲಿದೆ. ತಕ್ಷಣ ಪರಿಹಾರಕ್ಕಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಕೇರಳದಲ್ಲಿ 400 ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ದೇಶದ ಹಲವು ಭಾಗಗಳಿಂದ ಪರಿಹಾರ ಹರಿದು ಬರುತ್ತಿದ್ದು ಸೇನಾ ಪಡೆಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.