ಕಾಸರಗೋಡು, ಅ 2: ಕಾರಿನ ಮೇಲೆ ಕೊಳವೆ ಬಾವಿ ತೋಡುವ ಇಂಜಿನ್ ಹೊತ್ತ ಲಾರಿ ಯೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತ ಇಂದು ಬೆಳಿಗ್ಗೆ ಬದಿಯಡ್ಕಯದ ಮಾವಿನಕಟ್ಟೆ ಬಳಿಯ ಕೋಳಾರಿಯಲ್ಲಿ ಸಂಭವಿಸಿದೆ.
ಕಾರಿನಲ್ಲಿದ್ದ ಕೋಳಾರಿ ಮದ್ದಂಗುಯಿ ನಿವಾಸಿ ಮೊಹಮ್ಮದ್ ಕುಂಞಿಹಾಜಿ (72), ಇವರ ಪುತ್ರ ಮುನೀರ್(32) ಎಂಬವರು ಗಂಭೀರ ಗಾಯ ಗೊಂಡಿದ್ದಾರೆ.
ಕೋಳಾರಿಯ ವ್ಯಕ್ತಿಯೊಬ್ಬರ ಮನೆ ಬಳಿ ಕೊಳವೆ ಬಾವಿ ತೋಡಲೆಂದು ಸೋಮವಾರ ಬೆಳಿಗ್ಗೆ ಸುಮಾರು 10.45 ರ ವೇಳೆ ಲಾರಿ ಆಗಮಿಸಿದೆ. ರಸ್ತೆಯಿಂದ ಮನೆ ಅಂಗಳದಾಚೆ ಲಾರಿ ಹಿಂದಕ್ಕೆ ಸರಿಯುತ್ತಿದ್ದಾಗ ಕಾರು ಆಗಮಿಸಿತ್ತು. ಕಿರಿದಾದ ರಸ್ತೆಯಾದುದರಿಂದ ಕಾರನ್ನು ಸಮೀಪದಲ್ಲಿ ನಿಲ್ಲಿಸಿದ್ದು ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ಮಗುಚಿ ಕಾರಿನ ಮೇಲೆ ಬಿದ್ದಿದೆ. ಅಪಘಾತದಿಂದ ನಜ್ಜುಗುಜಾದ ಕಾರಿನೊಳಗೆ ಸಿಲುಕಿದ್ದ ಮೊಹಮ್ಮದ್ ಕುಂಞಿ ಹಾಜಿ ಹಾಗೂ ಮುನೀರ್ರನ್ನು ಹೊರತೆಗೆಯಲು ನಾಗರಿಕರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಕಾಸರಗೋಡಿನಿಂದ ಅಗ್ನಿಶಾಮಕದಳ, ಬದಿಯಡ್ಕ ಪೊಲೀಸರು ಶ್ರಮದೊಂದಿಗೆ ಕ್ರೇನ್ ಮೂಲಕ ಸುಮಾರು ಒಂದು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ಲಾರಿಯನ್ನು ಮೇಲಕ್ಕೆತ್ತಿದ ಬಳಿಕ ಕಾರಿನಲ್ಲಿದ್ದವರನ್ನು ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೊಹಮ್ಮದ್ ಕುಂಞಿ ಹಾಜಿ ಹಾಗೂ ಪುತ್ರ ಮುನೀರ್ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.