ಸುಳ್ಯ, ಆ.18: ಇಲ್ಲಿನ ಮೊಣ್ಣಂಗೇರಿಯಲ್ಲಿ ಗುಡ್ಡ ಕುಸಿತ ಪರಿಣಾಮ ನೂರಾರು ಮಂದಿ ನಿರಾಶ್ರಿತರಾಗಿದ್ದು ಅಪಾಯದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯ ಎಸ್ಡಿಆರ್ಎಫ್ ಸಿಬ್ಬಂದಿಗಳಿಂದ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಶಾಲೆಗಳಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ಸುಮಾರು 800 ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ. ಅಲ್ಲದೇ ಭೂ ಕುಸಿತವಾಗಿರುವ 2ನೇ ಮೆಣ್ಣಂಗೇರಿ ಪ್ರದೇಶದ ಗುಡ್ಡದಲ್ಲಿ ಇನ್ನೂ ಸುಮಾರು 80ರಿಂದ 100 ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷ ಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೋಡುಪಾಲದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಸಿಲುಕಿಕೊಂಡಿದ್ದ ಸುಮಾರು 60ರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ಕರೆ ತಂದು ಅವರನ್ನು ಕಲ್ಲುಗುಂಡಿ ಶಾಲೆ ಮತ್ತು ಅರಂತೋಡು ತೆಕ್ಕಿಲ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಕೂಡ ನೂರಕ್ಕೂ ಅಧಿಕ ಮಂದಿ ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ.