ತಿರುವನಂತಪುರ, ಆ.18: ಶತಮಾನದ ಭೀಕರ ಪ್ರವಾಹಕ್ಕೊಳಗಾದ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಸಮೀಕ್ಷೆ ನಡಸಿದರು.
ತಿರುವನಂತಪುರಂನಲ್ಲಿ ಮಹತ್ವದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಪ್ರವಾಹ ಹಾನಿಯ ಬಗ್ಗೆ ವಿವರಗಳನ್ನು ಪಡೆದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಕೆ.ಜೆ.ಅಲ್ಫಾನ್ಸೋ, ರಾಜ್ಯದ ಸಚಿವರು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ವಿವರಗಳನ್ನು ನೀಡಿದರು.
ಈ ಹಿನ್ನೆಲೆಯಲ್ಲಿ, ಪ್ರವಾಹ ಪರಿಸ್ಥಿತಿಯ ನೆರವಿಗಾಗಿ ಕೇಂದ್ರ ಸರ್ಕಾರದ ವತಿಯಿಂದ 500 ಕೋಟಿ ರೂಪಾಯಿ ಮಧ್ಯಂತರ ನೆರವು ಘೋಷಿಸಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೇಂದ್ರದಿಂದ 100 ಕೋಟಿ ರೂ. ಪ್ಯಾಕೇಜನ್ನು ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ, ಮೃತಪಟ್ಟ ಪ್ರತಿಯೊಬ್ಬರಿಗೂ ತಲಾ 2 ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದ್ದು, ಅದನ್ನು ಅವರ ಕುಟುಂಬಕ್ಕೆ ನೀಡಲಾಗುವುದು ಹಾಗೂ ಗಂಭೀರ ಗಾಯಗೊಂಡವರಿಗೆ 50,000 ರೂ. ಮೀಸಲಿಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
ಮಹಾಮಳೆಯಿಂದಾಗಿ ಸಂಕಷ್ಟದಲ್ಲಿರುವ ಕೇರಳದಲ್ಲಿ ಈಗಾಗಲೇ ಪ್ರವಾಹಕ್ಕೆ 320ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು. ಪರಿಸ್ಥಿತಿ ಇನ್ನೂ ಹತೋಟಿಗೆ ಬಂದಿಲ್ಲ. ಕೇರಳದಲ್ಲಿ ಸುರಿಯುತ್ತಿರುವ ಮಳೆ ಕ್ಷಣಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 106 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ 320ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕೇರಳದಲ್ಲಿ ಸಂತ್ರಸ್ತರ ರಕ್ಷಣೆಗೆ ಭಾರತೀಯ ಸೇನೆಯ ಕಾಲ್ದಳ, ವಾಯುದಳ ಮತ್ತು ನೌಕಾದಳಗಳ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಅಗಸ್ಟ್ 20 ರವರೆಗೆ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಕೇಂದ್ರ ನೀಡಿದೆ.