ಮಡಿಕೇರಿ, ಆ.18: ಇಲ್ಲಿನ ಕೊಡಗು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ, ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಮತ್ತೆ ಮತ್ತೆ ಮಳೆ ಆರ್ಭಟಿಸುತ್ತಿದ್ದು, ಮಳೆಯ ಅಬ್ಬರದ ಜೊತೆಗೆ, ಬಿರುಗಾಳಿಯೂ ಬೀಸುತ್ತಿದೆ.
ಮಕ್ಕಂದೂರು ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದ್ದು, ಭೂಕುಸಿತವು ಹೆಚ್ಚಾಗುತ್ತಿದೆ. ಸುಮಾರು 600ಕ್ಕೂ ಹೆಚ್ಚು ಮಂದಿ ಬೆಟ್ಟಗಳಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪುನರ್ವಸತಿ ಕೇಂದ್ರಗಳು ಭರ್ತಿಯಾಗಿವೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಮಳೆ ಹಾಗೂ ಗುಡ್ಡ ಕುಸಿತದಿಂದ ಕೊಡಗಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ಗಂಟೆಯಲ್ಲಿ ಐವರು ಮೃತಪಟ್ಟಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತಗೊಂಡಿರುವ ಜನರ ರಕ್ಷಣೆಗೆ ಸೇನಾಪಡೆ ಧಾವಿಸಿದೆ. ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರು ಬೆಟ್ಟಗಳನ್ನು ಹತ್ತಿ ಗಂಜಿ ಕೇಂದ್ರದತ್ತ ಬರುತ್ತಿದ್ದಾರೆ. ನಿರಾಶ್ರಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಾವೇರಿ ನಾಡು ಬೆಟ್ಟ ಗುಡ್ಡ ಕುಸಿತದಿಂದ ತತ್ತರಿಸಿ ಹೋಗಿದೆ. ಮಾತ್ರವಲ್ಲ ಸಂಚಾರ ಕಲ್ಪಿಸುವ ಹಲವು ಮಾರ್ಗಗಳು ಬಂದ್ ಆಗಿದೆ.
ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಕಂಟ್ರೋಲ್ ರೂಂ ಸಿಬ್ಬಂದಿ ಸಂಕಷ್ಟಕ್ಕೆ ಒಳಗಾಗಿರುವ ವರಿಂದ ಕರೆಗಳನ್ನು ಸ್ವೀಕರಿಸುತ್ತಲೇ ಇದ್ದಾರೆ. ಕೊಡಗಿನಲ್ಲಿ ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಂಪರ್ಕ ರಸ್ತೆಗಳಿಲ್ಲದ ಕಾರಣ ಸ್ಥಳಕ್ಕೆ ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತೆರಳಲು ಅಡ್ಡಿಯಾಗಿದೆ.
ಮಳೆಯ ರಭಸಕ್ಕೆ ಹಾಸನದ ಎಡಕುಮೇರಿಯಲ್ಲಿ ರೈಲ್ವೆ ಸೇತುವೆಗಳು ಕೊಚ್ಚಿ ಹೋಗಿವೆ. ಬೆಂಗಳೂರು ಮಂಗಳೂರು ರೈಲು ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ 50 ಕಡೆ ಗುಡ್ಡ ಕುಸಿದಿದೆ. ಸಂತ್ರಸ್ತರ ಜನರಿಗಾಗಿ ಈಗಾಗಲೇ 37 ನಿರಾಶ್ರಿತ ಶಿಬಿರಗಳನ್ನು ಸ್ಥಾಪನೆ ಮಾಡಲಾಗಿದೆ.