ತಿರುವನಂತಪುರಂ, ಆ.18: ಭಾರೀ ಪ್ರವಾಹದಿಂದ ಕಂಗೆಟ್ಟಿರುವ ಕೇರಳಕ್ಕೆ ಶುಕ್ರವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸುವವರಿದ್ದರು. ಆದರೆ, ಪ್ರತಿಕೂಲ ಹವಮಾನದಿಂದಾಗಿ ಮೋದಿಯವರ ವೈಮಾನಿಕ ಸಮೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಹಾಮಳೆಯಿಂದಾಗಿ ಸಂಕಷ್ಟದಲ್ಲಿರುವ ಕೇರಳದಲ್ಲಿ ಈಗಾಗಲೇ ಪ್ರವಾಹಕ್ಕೆ 320ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು. ಪರಿಸ್ಥಿತಿ ಇನ್ನೂ ಹತೋಟಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಸ್ಥಿತಿ ಅವಲೋಕನಕ್ಕಾಗಿ ಶುಕ್ರವಾರ ರಾತ್ರಿ ಕೇರಳಕ್ಕೆ ಆಗಮಿಸಿದ್ದಾರೆ. ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳನ್ನು ಇಂದು ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕನ ನಡೆಸುವವರಿದ್ದರು. ಆದರೆ, ಕೇರಳದಲ್ಲಿ ಉಂಟಾಗಿರುವ ಪ್ರತಿಕೂಲ ಹವಮಾನದ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ರದ್ದಾಗಿದೆ ಎಂದು ತಿಳಿದುಬಂದಿದೆ.
ಕೇರಳದಲ್ಲಿ ಸುರಿಯುತ್ತಿರುವ ಮಳೆ ಕ್ಷಣಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, 24 ಗಂಟೆಗಳ ಅವಧಿಯಲ್ಲಿ 106 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ 320ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸಂತ್ರಸ್ತರ ರಕ್ಷಣೆಗೆ ಭಾರತೀಯ ಸೇನೆಯ ಕಾಲ್ದಳ, ವಾಯುದಳ ಮತ್ತು ನೌಕಾದಳಗಳ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ.