ಮಂಗಳೂರು, ಆ.18: ಕರಾವಳಿ, ಮಲೆನಾಡು ದೇರಿದಂತೆ ದೇವರ ನಾಡಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿಯ ಜನರು ಬೀದಿಗೆ ಬಂದಿದ್ದು, ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದೆ. ಕೊಡಗು, ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ, ಶನಿವಾರ ಸಂತೆ, ಮಾಂದಲ್ ಪಟ್ಟಿ ಸೇರಿದಂತೆ ವಿವಿಧೆಡೆ ನಿರಂತರ ಮಳೆಗೆ ಜನತೆ ತತ್ತರಿಸಿದ್ದಾರೆ.
ಈ ಹಿನ್ನೆಲೆ, ಕೊಡಗು ಮತ್ತು ಕೇರಳದ ಪರಿಸ್ಥಿತಿ ಸುಧಾರಿಸಲು ಮತ್ತು ಪ್ರವಾಹದಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯ ಕೈ ಎತ್ತಿ ಹಿಡಿಯಲು ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತವು ಜನರಲ್ಲಿ ನೆರವಿಗೆ ಧಾವಿಸಿ ಬರಲು ವಿನಂತಿ ಮಾಡಿಕೊಂಡಿದೆ. ಮಾತ್ರವಲ್ಲ, ಸಂತ್ರಸ್ತರಿಗೆ ಆರ್ಥಿಕ ಸಹಾಯ ಒದಗಿಸಲು ಎಲ್ಲ ಚರ್ಚ್ಗಳಲ್ಲಿ ಆ.19ರಂದು ಧನ ಸಂಗ್ರಹ ಮಾಡಲು ಸೂಚಿಸಲಾಗಿದೆ ಎಂದು ಧರ್ಮ ಪ್ರಾಂತದ ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಹಲವಾರು ಜನರು ಸಾವು-ನೋವು ಅನುಭವಿಸಿದ್ದಾರೆ. ಈ ವೇಳೆ ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ, ಸಂತ್ರಸ್ತರಿಗೆ ನೆರವಾಗಲು ಜನರು ಉದಾರವಾಗಿ ಮುಂದೆ ಬರಬೇಕು. ಪ್ರವಾಹ ಪೀಡಿತ ಜನರಿಗೆ ಅಗತ್ಯ ವಸ್ತುಗಳ ಜೊತೆಗೆ ಆರ್ಥಿಕ ಸಹಾಯ ನೀಡಬಹುದು ಎಂದು ಮನವಿ ಮಾಡಿದರು.