ಮಂಗಳೂರು, ಆ.17: ಕೇರಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆ ಕರಾವಳಿಗರ ನಿದ್ದೆಗೆಡಿಸಿದೆ. ಕೇರಳದಲ್ಲಿ ಮಳೆ ಸೃಷ್ಟಿಸಿರುವ ಭೀತಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಆವರಿಸಿದೆ. ನಿನ್ನೆ ರಾತ್ರಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಕೇರಳದಂತೆ ಜಿಲ್ಲೆಯಲ್ಲಿಯೂ ಪ್ರವಾಹದ ಭೀತಿ ಎದುರಾಗಿದೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿದೆ. ಈ ಪ್ರದೇಶದಲ್ಲಿ ಹರಿಯುವ ಕುಮಾರಧಾರ, ಪಯಸ್ವಿನಿ ಸೇರಿದಂತೆ ಇನ್ನಿತರ ಸಣ್ಣ ಹೊಳೆಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನದಿಯ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಕರಾವಳಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಷ್ಟ್ರಿಯ ವಿಪತ್ತು ನಿರ್ವಹಣಾ ಪಡೆ ಮುನ್ನೆಚ್ಚರಿಕೆ ನೀಡಿದೆ.
ಅಪಾಯದ ಮಟ್ಟ ಮೀರಿ ನೇತ್ರಾವತಿ ನದಿ ಹರಿಯುತ್ತಿದ್ದು, ನೇತ್ರಾವತಿ ನದಿ ನೀರಿನ ಮಟ್ಟ 9 ಮೀಟರ್ ದಾಖಲಿಸಲಾಗಿದೆ. ಮಾತ್ರವಲ್ಲ, ಬಂಟ್ವಾಳದ ಹಲವು ಪ್ರದೇಶಗಳು ಮುಳುಗಡೆ ಆಗುವ ಭೀತಿ ಎದುರಿಸುತ್ತಿದೆ. ನೇತ್ರಾವತಿ ನದಿ ತಟದ ಗ್ರಾಮಗಳು ಜಲಾವೃತಗೊಂಡಿದ್ದು, ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ಮುಂದಿನ 24 ಗಂಟೆಯಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ.