ಉಡುಪಿ, ಆ.17: ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ದೇಶವೇ ಶೋಕ ಸಾಗರದಲ್ಲಿ ಮುಳುಗಿದ್ದು, ಅವರ ನಿಧನ ನಮ್ಮ ದೇಶಕ್ಕೆ ದೊಡ್ಡ ನಷ್ಟ ಎಂದು ಪೇಜಾವರ ಮಠಾಧೀಶ, ಅಷ್ಠಮಠಗಳಲ್ಲಿನ ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ವಾಜಪೇಯಿ ವಿಶ್ವದ ಮಹಾನ್ ನಾಯಕ. ಅಜಾತಶತ್ರುವಾಗಿದ್ದ ವಾಜಪೇಯಿ ಸರ್ವ ಜನ ಪ್ರಿಯರಾಗಿದ್ದರು. ಮಾತ್ರವಲ್ಲ, ಶ್ರೇಷ್ಠ ಆಡಳಿತಗಾರರು ಹೌದು. ದೇಶಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೂಡ ಒಬ್ಬರು. ಎಲ್ಲಾ ಪಕ್ಷದವರನ್ನು ಜಾಣ್ಮೆ ಯಿಂದ ಮುನ್ನಡೆಸಿದ್ದಾರೆ. ಅವರೊಬ್ಬ ಶ್ರೇಷ್ಠ ಆಡಳಿತಗಾರ, ಧೀಮಂತ ನಾಯಕ ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಭಾರತ ದೇಶದ ಒಂದು ದಿವ್ಯ ಸಂಕೇತವಾಗಿ ಅವರು ಕಂಗೊಳಿಸುತ್ತಾರೆ. ವಾಜಪೇಯಿ ಅವರ ನಡೆ ನುಡಿ, ವಿಚಾರ ಹಾಗೂ ನಡವಳಿಕೆ ಆದರ್ಶಪ್ರಾಯ. ಅದು ಎಲ್ಲರಿಗೂ ಮಾದರಿಯಾಗಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಉಡುಪಿ ಅಷ್ಠಮಠಗಳ ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಗಳು ಪ್ರಾರ್ಥಿಸಿಕೊಂಡರು.