ನವದೆಹಲಿ, ಆ 16: ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ರಾಜಕೀಯ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ೯೩ ವರ್ಷದ ಅಟಲ್ ಬಿಹಾರಿ ವಾಜಪೇಯಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಆಗಸ್ಟ್ ೧೬ ರ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಅವರನ್ನು ಜೂನ್ 11 ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು.
ಅಟಲ್ ರವರು, 1924 ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದ ಇವರು ತಮ್ಮ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗಿನ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು.ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. 'ವೀರ ಅರ್ಜುನ' ಹಾಗೂ 'ಪಾಂಚಜನ್ಯ' ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದ್ದರು.
ಮೂರು ಬಾರಿ ದೇಶವನ್ನು ಪ್ರಧಾನಿಯಾಗಿ ಅವರು ಮುನ್ನಡೆಸಿದ್ದು, ಸಮ್ಮಿಶ್ರ ಸರಕಾರದಲ್ಲಿ ಎಲ್ಲರನ್ನೂ ಜೊತೆಗೂಡಿಸಿಕೊಂಡು ಸಮರ್ಥವಾಗಿ ಆಡಳಿತವನ್ನು ನೀಡಿದ್ದ ಹೆಗ್ಗಳಿಕೆ ಹೊಂದಿದ್ದರು. ಡಿಸೆಂಬರ್ 2005 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದರು.