ಮಂಗಳೂರು, ಆ 16: ಆಗಸ್ಟ್ 7 ರಂದು ಕೊಚ್ಚಿನ್ ನಲ್ಲಿ ಬೋಟ್ ಗೆ ಡಿಕ್ಕಿಯಾಗಿ ಮೂವರ ಪ್ರಾಣಕ್ಕೆ ಕುತ್ತು ತಂದ ಆರೋಪ ಎದುರಿಸುತ್ತಿರುವ ಎಂ.ವಿ. ದೇಶಶಕ್ತಿ ತೈಲ ನೌಕೆಯ ಮೂವರು ಸಿಬ್ಬಂದಿಗಳನ್ನು, ಕೊನೆಗೂ ಕೊಚ್ಚಿನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೌಕೆಯ ಕ್ಯಾಪ್ಟನ್ , ಸೆಕೆಂಡ್ ಅಫೀಸರ್ ಹಾಗೂ ಸೀಮನ್ ರನ್ನು ಆಗಸ್ಟ್ 15 ರ ಬುಧವಾರ ಬೆಳಗ್ಗೆಯೇ ರೈಲಿನಲ್ಲಿ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಂಧಿಸಲ್ಪಟ್ಟ ಮೂವರ ಬದಲಿಗೆ ಹಡಗಿನ ಪ್ರಯಾಣ ಮುಂದುವರಿಸಲು ಅವಕಾಶ ನೀಡುವ ಸಾಧ್ಯತೆ ಇದ್ದು, ಬದಲಿ ಸಿಬ್ಬಂದಿ ಮುಂಬೈನಿಂದ ಆಗಮಿಸಿಬೇಕಾಗಿದೆ. ಇನ್ನೆರಡು ದಿನಗಳ ಒಳಗೆ ಹಡಗು ಇರಾಕ್ ಗೆ ತೆರಳಲಿದೆ. ಸಧ್ಯ ಈ ಹಡಗು ಖಾಲಿ ಇದ್ದು, ಇರಾಕ್ ನ ಬಸ್ರಾ ಬಂದರಿನಿಂದ ತೈಲ ಸಾಗಾಟ ನಡೆಸುತ್ತದೆ.
ಅಪಘಾತದ ತನಿಖೆಗಾಗಿ ಹಡಗಿನ ತಳಭಾಗ ಪರಿಶೀಲನೆ ನಡೆದಿದ್ದ ಅಂಡರ್ ವಾಟರ್ ಡೈವಿಂಗ್ ತಜ್ಞರು, ಅಪಘಾತ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಅದಕ್ಕಾಗಿ ಕೆಲವು ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಲ್ಯಾಬ್ ಗೆ ಕಳುಹಿಸಲಾಗಿದ್ದು, ಅದರಲ್ಲೂ ಮೀನುಗಾರಿಕಾ ದೋಣಿಗೆ ಡಿಕ್ಕಿಯಾಗಿರುವುದು ದೃಢಪಟ್ಟಿದೆ. ಅಲ್ಲದೆ ಮೀನುಗಾರಿಕಾ ದೋಣಿಯ ಓಶಿಯಾನಿಕ ಒಡೆದ ಬಳಿಕ ಬದುಕಿದವರಲ್ಲೊಬ್ಬರು ದೇಶಶಕ್ತಿ ಹಡಗಿನ ಹೆಸರು ನೋಡಿದ್ದು, ಅದರ ಮಾಹಿತಿ ಪೊಲೀಸರಿಗೆ ನೀಡಿದ ಹಿನ್ನಲೆಯಲ್ಲಿ ಈ ಆರೋಪ ಇನ್ನಷ್ಟು ಬಲವಾಗಿತ್ತು. ಆ ಬಳಿಕ ಮರ್ಕೆಂತೈಲ್ ಮರೇನ್ ಇಲಾಖೆ ಹಾಗೂ ಕೊಚ್ಚಿನ್ ಪೊಲೀಸರು ಪೂರ್ಣ ಪ್ರಾಥಮಿಕ ವಿಚಾರಣೆ ನಡೆಸಿ ಇದೀಗ ಆರೋಪಿಗಳನ್ನು ಕರೆದೊಯ್ದಿದ್ದಾರೆ.
ಇನು ಕೊಚ್ಚಿನ್ನಿಂದ 23 ನಾಟಿಕಲ್ ಮೈಲಿ ದೂರ ಸಮುದ್ರದಲ್ಲಿ ಮಂಗಳವಾರ ಮುಂಜಾನೆ 3.30ಕ್ಕೆ ಮೀನುಗಾರಿಕಾ ದೋಣಿಗೆ ದೇಶಶಕ್ತಿ ಹಡಗು ಡಿಕ್ಕಿಯಾಗಿ ಮೂವರು ಮೃತಪಟ್ಟು 9 ಮಂದಿ ನಾಪತ್ತೆಯಾಗಿದ್ದರು. ಇಬ್ಬರು ದೋಣಿಯ ಹಲಗೆ ಹಿಡಿದು ತೇಲಿದ್ದು, ಅವರನ್ನು ಇತರ ದೋಣಿಯವರು ರಕ್ಷಿಸಿದ್ದರು. ಆದರೆ ದೇಶಶಕ್ತಿ ಹಡಗು ಅಪಘಾತ ಬಳಿಕ ರಕ್ಷಣಾ ಕಾರ್ಯಕ್ಕೆ ಮುಂದಾಗದೆ ಪ್ರಯಾಣ ಮುಂದುವರಿಸಿತ್ತು. ಇದರ ಬೆನ್ನುಹಿಡಿದ ಕರಾವಳಿ ರಕ್ಷಣಾ ಪಡೆಯವರು ಮಂಗಳೂರು ಬಂದರಿಗೆ ಮಂಗಳವಾರ ಹಡಗನ್ನು ರಾತ್ರಿ ಕರೆತಂದಿದ್ದರು. ಆದರೆ ಬಂದರಿನೊಳಗೆ ಬರ್ತ್ನಲ್ಲಿ ಜಾಗ ಇಲ್ಲದ ಕಾರಣ ಬಂದರಿನ ಪ್ರವೇಶದ ಬಳಿಯೇ ಹಡಗು ನಿಂತಿದ್ದು, ಗುರುವಾರವಷ್ಟೇ ಒಳ ಬಂದು ಲಂಗರು ಹಾಕಿದೆ.