ಕುಂದಾಪುರ, ಆ 16: ಕರಾವಳಿಯಲ್ಲಿ ಯಾವುದೇ ಸಂದರ್ಭದಲ್ಲಿಯೂ ಕೇಳಿ ಬರುವ ಮತ್ತು ಸರ್ಕಾರ ಹಾಗೂ ಇಲಾಖೆಯಿಂದ ಅಘೋಷಿತವಾಗಿ ಗುರುತಿಸಲ್ಪಟ್ಟ ಕೆಲವು ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮ ಪಂಚಾಯಿತಿ ಕಂಡ್ಲೂರು ಕೂಡಾ ಒಂದು. ಆದರೆ ಅದೇ ಕಂಡ್ಲೂರು ಇತಿಹಾಸದಿಂದಲೇ ಕೋಮು ಸಾಮರಸ್ಯದ ಪ್ರತೀಕವಾಗಿ ಬೆಳೆದು ಬಂದಿತ್ತು.
ಕೋಮುಸೂಕ್ಷ್ಮ ಪ್ರದೇಶವಾಗಿ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಂಡ ಕಂಡ್ಲೂರಿಗೆ ಚರಿತ್ರೆಯಲ್ಲಿ ಬೇರೆಯದೇ ಗುರುತಿದೆ. ಐತಿಹಾಸಿಕವಾಗಿಯೂ ವಾಣಿಜ್ಯ ವ್ಯವಹಾರಗಳಲ್ಲಿ ಬಸ್ರೂರು ಬಂದರಿಗೆ ತಾಗಿಕೊಂಡೇ ಇರುವ ಕಂಡ್ಲೂರು ತನ್ನದೇ ಆದ ಛಾಪನ್ನು ಸಾವಿರಾರು ವರ್ಷಗಳ ಹಿಂದಿನಿಂದಲೇ ಬೆಳೆಸಿಕೊಂಡಿತ್ತು. ಅದರ ಪ್ರತೀಕವಾಗಿ ಪ್ರತೀ ವರ್ಷವೂ ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸ್ತವ್ಯವಿರುವ ಹಿಂದೂಗಳು ಹಾಗೂ ಮುಸ್ಲಿಮರು ತಮ್ಮೆಲ್ಲಾ ಆಕ್ರೋಶಗಳನ್ನು ಬದಿಗಿಟ್ಟು ಶಾಂತಿ ಸಾಮರಸ್ಯಗಳಿಂದ ಜೊತೆಯಾಗಿ ಮಾರಿ ಹಬ್ಬ ಆಚರಿಸುವುದು ವಿಶೇಷ. ಈ ಬಾರಿಯೂ ಇದೇ ರೀತಿಯ ಸಾಮರಸ್ಯದ ಮಾರಿ ಹಬ್ಬದಾಚರಣೆಯನ್ನು ಬುಧವಾರ ಸಂಜೆ ಕಂಡ್ಲೂರಿನಲ್ಲಿ ಎಲ್ಲಾ ಧರ್ಮದವರ ಸಹಯೋಗದೊಂದಿಗೆ ಆಚರಿಸಲಾಯಿತು.
ಕುಬ್ಜಾ ಮತ್ತು ವಾರಾಹಿ ಸಂಗಮ ಕೂಡುವ ಸ್ಥಳವು ಕೂಡ್ಲೂರು ಆದ್ದರಿಂದ, ಇದು ಕಂಡ್ಲೂರಾಗಿ ಪರಿಣಮಿಸಿತು. ಹಿಂದೆ ತುಂಡರಸರ ಕಾಲದಲ್ಲಿ, ದೇವವರ್ಮ ಎಂಬ ಅರಸ ಆಳ್ವಿಕೆಯಲ್ಲಿದ್ದನು. ಕುಬ್ಜ ಋಷಿಯ ಆಶೀರ್ವಾದದ ಫಲದಿಂದ ದೇವವರ್ಮನಿಗೆ ಹೆಣ್ಣು ಮಗು ಜನಿಸಿತು. ಇವಳಿಗೆ ಶ್ರೀದೇವಿ ಎಂದು ನಾಮಕರಣ ಮಾಡಿದರು.
ಅಮ್ಮನಬೆಟ್ಟು ಎಂಬಲ್ಲಿ ದೇವಮ್ಮ ಎಂಬುವಳು ಜಾನುವಾರುಗಳನ್ನು ಸಾಕಿ ತನ್ನ ಜೀವನವನ್ನು ನಡೆಸುತ್ತಿದ್ದಳು. ಒಂದಾನೊಂದು ದಿನ ಅವಳು ಸಾಕಿದ ಜಾನುವಾರಿನಲ್ಲಿ ಕಪಿಲ ಎಂಬ ಹಸುವು ತಪ್ಪಿಸಿಕೊಂಡು ಬಂದು, ತನ್ನ ಕ್ಷೀರವನ್ನು ಕನ್ನಿಕಾವನವೆಂಬಲ್ಲಿ ತಾನಾಗಿಯೇ ಇಳಿಸುತ್ತಿತ್ತು. ಇದನ್ನು ಗೋಪಾಲಕನ ಮುಖೇನ ದೇವಮ್ಮನು ತಿಳಿದು, ಇಲ್ಲಿ ಏನೋ ವಿಶೇಷತೆ ಉಂಟೆಂದು ಭಾವಿಸಿ, ಪುರೋಹಿತರಲ್ಲಿ ತಿಳಿಯುವಾಗ, ಆ ಸ್ಥಳದಲ್ಲಿ 3 ಹೊಸ ಬಾಂಡವನ್ನು ಬುಡ ಮೇಲಾಗಿ ಇಟ್ಟು ಒಂದು ವಾರದವರೆಗೆ ಅದನ್ನು ಯಾರೂ ನೋಡಬಾರದಂತೆ ನೇಮಕ ಮಾಡಿದಳು.
ಇತ್ತಲಾಗಿ, ಸೊಕ್ಕಿದ ರಕ್ಕಸನು ಕನ್ನಿಕಾವನದೆಡೆಗೆ ಆಗಮಿಸಿ, ಉದ್ರೇಕಗೊಂಡು, ಇದೇನು ಮೂರ್ಖತನ ಎಂದು, ತನ್ನ ಎಡಗಾಲಿನ ತುದಿಯಿಂದ ತುಳಿಯುತ್ತಾನೆ. ಆ ಕೂಡಲೇ ದೇವಿಯು ಪ್ರತ್ಯಕ್ಷಳಾಗಿ, ಕಾಕಾಸುರನನ್ನು ವಧೆಮಾಡುವ ಸಂದರ್ಭದಲ್ಲಿ, ಕಾಕಾಸುರ ಒಂದು ವರವನ್ನು ಕೇಳುತ್ತಾನೆ. ಇನ್ನು ಮುಂದೆ ಈ ಊರು-ಕೇರಿ, ಆಸು-ಪಾಸು, ಹಾಗೂ ಪರ ಊರಿನ ಎಲ್ಲವರನ್ನು ಸೇರಿಸಿ, ವರ್ಷಕ್ಕೊಂದಾವರ್ತಿ ಮಾರಿಜಾತ್ರೆಯನ್ನು ನಡೆಸಿ, ನನಗೆ ಹವಿರ್ಭಾಗವನ್ನು ಕೊಡಿಸಬೇಕೆಂದು ಕೇಳುತ್ತಾನೆ. ಅದೇ ರೀತಿ ವರ್ಷಕ್ಕೊಂದಾವರ್ತಿ ರಕ್ತಾಹಾರವನ್ನು ಕೊಟ್ಟು ಜಾತ್ರೆ ನಡೆಸಿ ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ದೇವಿಯು ಒಪ್ಪಿ ರಕ್ಕಸರ ಸಂಹಾರ ಮಾಡುತ್ತಾಳೆ. ಅದೇ ರೀತಿಯಾಗಿ ಅಂದಿನಿಂದ ಇಂದಿನವರೆಗೂ ಸರ್ವಧರ್ಮ ಸಮನ್ವತೆಯಲ್ಲಿ ಮಾರಿ ಹಬ್ಬವನ್ನು ಆಚರಣೆ ಮಾಡುತ್ತಾ ಕೋಳಿ ಕುರಿಗಳನ್ನು ಬಲಿಕೊಡುತ್ತಾ ಬರಲಾಗುತ್ತಿದೆ.
ಆದರೆ ನಂತರದ ದಿನಗಳಲ್ಲಿ ಹಿಂದೂ ಮುಸ್ಲಿಂ ಸಮ ಸಂಖ್ಯೆಯಲ್ಲಿ ಬೆಳೆದ ಪರಿಣಾಮ ಪರಸ್ಪರ ಹೊಟ್ಟೆಕಿಚ್ಚಿಗೆ ದಾರಿಯಾದ ಹಿನ್ನೆಲೆಯಲ್ಲಿ ಐತಿಹಾಸಿಕ ಸಾಮರಸ್ಯಕ್ಕೆ ಹಿನ್ನಡೆಯಾಗಿತ್ತು. ಪರಿಣಾಮವಾಗಿ ದೇಶದ ಎಲ್ಲೇ ಗಲಾಟೆ ದೊಂಬಿಗಳಾದರೂ ಕಂಡ್ಲೂರಿನಲ್ಲಿ ಪೊಲೀಸ್ ಕಾವಲು ಹಾಕಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಬುಧವಾರ ನೂರಾರು ಪೊಲೀಸರ ಭದ್ರತೆಯೊಂದಿಗೆ ಸರ್ವ ಧರ್ಮೀಯರ ಸಹಬಾಳ್ವೆಯೊಂದಿಗೆ ಮಾರಿ ಹಬ್ಬ ಮುಗಿದು ಹೋಗಿದೆ. ಸುತ್ತಲಿನ ಐದು ಗ್ರಾಮಗಳ ಭಕ್ತರು ಬೆಳಗ್ಗಿನಿಂದಲೇ ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ಕೇವಲ ಇಪ್ಪತ್ತು ಮೀಟರ್ ಅಂತರದಲ್ಲಿರುವ ಮಾರಿ ದೇವಸ್ಥಾನ ಹಾಗೂ ಮಸೀದಿಗಳ ನಡುವೆ ಬುಧವಾರ ಅಂತರವೇ ಇಲ್ಲದಂತೆ ಸಹಬಾಳ್ವೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಅಲ್ಲದೇ ಜಾತ್ರೆಯಲ್ಲಿ ಭಾಗವಹಿಸಿದ ಸಾವಿರಾರು ಭಕ್ತರಿಗೆ ಸ್ಥಳೀಯ ಮುಸ್ಲಿಂ ಮುಖಂಡರು ತಂಪು ಪಾನೀಯ ಹಾಗೂ ಚಹಾದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾರೀ ಜಾತ್ರೆಯ ಯಶಸ್ವಿಗೆ ಕೈಜೋಡಿಸುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ.