ಮಂಗಳೂರು, ಆ 15: ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದ ಶಿರಾಡಿ ಘಾಟಿಯಲ್ಲಿ ಪದೇ ಪದೇ ಗುಡ್ಡ ಕುಸಿತ ಸಂಭವಿಸುತ್ತಿದ್ದು ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 15 ರಂದು ಶಿರಾಡಿ ಘಾಟ್ ಹಾಗೂ ಸಂಪಾಜೆ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಇನ್ನೊಂದೆಡೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುವ ಸಂಭವವಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಹಾಸನ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಶಿರಾಡಿ ಘಾಟಿ ರಸ್ತೆಯ ಸ್ಥಿತಿಗತಿಯ ಮಾಹಿತಿಯನ್ನು ಪಡೆದುಕೊಂಡ ದ.ಕ. ಜಿಲ್ಲಾಧಿಕಾರಿ ಸೆಂಥಿಲ್ ಅವರು ಶಿರಾಡಿ ಘಾಟಿ ರಸ್ತೆಯನ್ನು ಬಳಸದಿರುವಂತೆ ಈ ಭಾಗದ ಮೂಲಕ ಸಂಚರಿಸುವವರಿಗೆ ಮನವಿ ಮಾಡಿಕೊಂಡಿದ್ದಾರೆ. ಪರ್ಯಾಯವಾಗಿ ಚಾರ್ಮಾಡಿ ಘಾಟ್ ಅನ್ನು ಬಳಸುವಂತೆ ಸೂಚನೆ ನೀಡಲಾಗಿದೆ.