ಮಂಗಳೂರು, ಆ 14: “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ರಾಜ್ಯ ಸರಕಾರ ಸೂಚಿಸಿದೆ” ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
“ನದಿ ತೀರ ಹಾಗೂ ರಾಜಾ ಕಾಲುವೆ ಪ್ರದೇಶಗಳ ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಮೇಲೆ ನಿಗಾ ಇಡಲಾಗಿದೆ. ಆಯಾ ತಹಶೀಲ್ದಾರ್ ಗಳು ತಮ್ಮ ತಾಲೂಕಿನ ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಹೊಣೆಗಾರರಾಗಿದ್ದು, ಸಾರ್ವಜನಿಕರಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಲಿದ್ದಾರೆ. ಸಾರ್ವಜನಿಕರೂ ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಸಚಿವರು ತಿಳಿಸಿದ್ದಾರೆ. ಶಿರಾಡಿ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ ತೆರವಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ” ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.