ಬೆಂಗಳೂರು, ಆ 14: ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಶಿರಾಡಿ ಘಾಟ್ ಕುಸಿದಿದ್ದು, ಈ ಹಿನ್ನೆಲೆ ರಾಜಧಾನಿಯಿಂದ ಮಂಗಳೂರಿಗೆ ಆಗಮಿಸುವ ಎಲ್ಲಾ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ನಿಗಮ ರದ್ದುಗೊಳಿಸಿದೆ. ಮಂಗಳೂರು, ಸುಬ್ರಹ್ಮಣ್ಯ, ಉಡುಪಿ ಹಾಗೂ ಕುಂದಾಪುರಕ್ಕೆ ಆಗಮಿಸುವ ಎಲ್ಲಾ ಕೆಎಸ್ಆರ್ ಟಿಸಿ ಬಸ್ ಗಳನ್ನು ರದ್ದುಗೊಳಿಸಿ ನಿಗಮ ಆದೇಶ ನೀಡಿದೆ. ಶಿರಾಡಿಯಲ್ಲಿ ಈಗಾಗಲೇ ಆಗಮಿಸಿದ ಹಲವು ಬಸ್ ಗಳು ಹೆದ್ದಾರಿ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದು, ಕಲವೊಂದು ಬಸ್ ಗಳಿಗೆ ಹಾನಿ ಸಂಭವಿಸಿದೆ. ಈ ಹಿನ್ನೆಲೆ ಶಿರಾಡಿಯಲ್ಲಿ ಎಲ್ಲಾ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಇನ್ನು ಬದಲಿ ಮಾರ್ಗವಾದ ಚಾರ್ಮಾಡಿ ಮೂಲಕ ಅಗತ್ಯಕ್ಕನುಗುಣವಾಗಿ ಕೆಲವೊಂದು ಬಸ್ ಗಳ ಸಂಚಾರಕ್ಕೆ ಮಾತ್ರ ನಿಗಮ ಅವಕಾಶವನ್ನು ಕಲ್ಪಿಸಿದೆ. ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಗುಡ್ಡ ಕುಸಿತದಿಂದ ಬಸ್ ಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ನಿಗಮ ಈ ನಿರ್ಧಾರ ಕೈಗೊಂಡಿದೆ. ಮುಂದಿನ ಆದೇಶದ ತನಕ ಬಸ್ ಸಂಚಾರ ಇರುವುದಿಲ್ಲ. ಇನ್ನು ಮಂಗಳೂರು, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯದಿಂದಲೂ ಕೂಡ ಬಸ್ ಗಳು ರಾಜಧಾನಿಯತ್ತ ತೆರಳುವುದಿಲ್ಲ. ಈ ಹಿನ್ನೆಲೆ ಪ್ರಯಾಣಿಕರು ಬದಲಿ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.