ಮಂಗಳೂರು, ಆ 14: ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಘಾಟ್ ಪ್ರದೇಶಗಳಲ್ಲಿ ಭೂಕುಸಿತಗಳು ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಶಿರಾಡಿಘಾಟ್ ಹಾಗೂ ಮಡಿಕೇರಿ-ಮಂಗಳೂರು ಹೆದ್ದಾರಿ ಮಧ್ಯೆ ಗುಡ್ಡ ಕುಸಿತದಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಗುಡ್ಡ ಕುಸಿತ ನಿರಂತರ ಮುಂದುವರೆದಿದೆ. ಇನ್ನೊಂದೆಡೆ ಚಾರ್ಮಾಡಿಯಲ್ಲೂ ಈ ಹಿಂದೆ ಹಲವು ಬಾರಿ ಭೂ ಕುಸಿತ ಉಂಟಾಗಿತ್ತು. ಇದೀಗ ನಿರಂತರ ಮಳೆಯ ಹಿನ್ನೆಲೆಯಲ್ಲಿ ಮತ್ತೆ ಭೂ ಕುಸಿತದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರು, ಅರಮನೆ ನಗರಿ ಮೈಸೂರು, ಮಂಜಿನ ನಗರಿ ಮಡಿಕೇರಿಗೆ ತೆರಳುವವರು ಎಚ್ಚರಿಕೆಯಿಂದ ಇರಲು ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇನ್ನು ಮಂಗಳೂರಿನಿಂದ ಬೆಂಗಳೂರು, ಮೈಸೂರು, ಮಡಿಕೇರಿ ಇನ್ನಿತರ ಪ್ರದೇಶಗಳಿಗೆ ತೆರಳುವವರು ಕುಸಿತವಾಗುತ್ತಿರುವ ಹೆದ್ದಾರಿಯನ್ನು ಹೊರತು ಪಡಿಸಿ ಬದಲಿ ಮಾರ್ಗ ಬಳಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಲಾಗಿದೆ.