ಸುಬ್ರಹ್ಮಣ್ಯ, ಆ 14: ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಜಿಲ್ಲೆಯ ಬಹುತೇಕ ಸೇತುವೆಗಳು ಮುಳುಗಡೆಯಾಗಿದ್ದು ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನರಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಸುತ್ತಮುತ್ತಲಿನ ಕೃಷಿ ತೋಟಗಳು ವಿಪರೀತ ಮಳೆಯಿಂದ ಜಲಾವೃತಗೊಂಡಿದೆ. ಪರಿಸರದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಅಂಗಡಿ ಮುಂಗಟ್ಟುಗಳ ಒಳಗೆ ನೀರು ನುಗ್ಗಿದೆ. ಹಲವೆಡೆ ಮನೆ, ಜಮೀನುಗಳಿಗೆ ನೀರು ನುಗ್ಗಿದ್ದು ದ್ವೀಪದಂತಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಮನೆ ಕುಸಿತಗೊಂಡಿದ್ದು ಸೊತ್ತುಗಳು ನೀರುಪಾಲಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ನಿರಂತರ ಮಳೆಗೆ ಹಳ್ಳ, ತೊರೆಗಳು ತುಂಬಿ ಹರಿಯುತ್ತಿದ್ದು ಫಲಭರಿತ ಗಿಡಗಳು, ಅಡಿಕೆ ಮರ, ಬಾಳೆಗಿಡಗಳು ಪ್ರವಾಹಕ್ಕೆ ಕೊಚ್ಚಿಹೋಗಿವೆ.